ಶಾಸಕ ವೈದ್ಯರ ಆಟ, ತಂಝೀಮ್‌ಗೆ ಭಾರೀ ಮುಖಭಂಗ
ಭಟ್ಕಳ ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

ಭಟ್ಕಳ, ಸೆ.29: ತಾಲೂಕಿನ ನೂತನ ಜಾಲಿ ಪಟ್ಟಣ ಪಂಚಾಯತ್‌ನ ಪ್ರಥಮ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಗುರುವಾರ ನಡೆದಿದ್ದು, ಶಾಸಕ ಮಾಂಕಾಳ್ ವೈದ್ಯ ಬೆಂಬಲಿತ ಅಭ್ಯರ್ಥಿಯ ಎದುರು ಬಹುಮತ ಹೊಂದಿದ ತಂಝೀಮ್ ಬೆಂಬಲಿತ ಅಭ್ಯರ್ಥಿ ತೀವ್ರ ಮುಖಭಂಗ ಎದುರಿಸಿದ್ದಾರೆ. ತಂಝೀಮ್‌ನ ಬಂಡಾಯ ಅಭ್ಯರ್ಥಿ ಅಬ್ದುರ್ರಹೀಂ ಶೇಕ್ ಅಧ್ಯಕ್ಷರಾಗಿ, ಕಾಂಗ್ರೆಸ್‌ನ ಲಕ್ಷ್ಮೀ ಮಾದೇವ ನಾಯ್ಕ ಹಾರ್ನಗದ್ದೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 20 ಸದಸ್ಯ ಬಲದ ಜಾಲಿ ಪಟ್ಟಣ ಪಂಚಾಯತ್‌ನಲ್ಲಿ 11 ಮಂದಿ ತಂಝೀವ್ ಬೆಂಬಲಿಗರಿದ್ದರು. ಕಾಂಗ್ರೆಸ್‌ನ 5, ಬಿಜೆಪಿಯ 3 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಬಹುಮತ ಹೊಂದಿದ್ದ ತಂಝಿಮ್ ತನ್ನ ಬೆಂಬಲಿತ ಸದಸ್ಯರಾದ ಇಮ್ರಾನ್ ಲಂಕಾ ಅಧ್ಯಕ್ಷ ಸ್ಥಾನಕ್ಕೆ, ಶಮೀವ್ ಬಾನು ಹವಾಲ್ದಾರ್ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನಾಗಿ ಘೋಷಿಸಿತ್ತು. ಇವರೇ ಅಧ್ಯಕ್ಷ,ಉಪಾಧ್ಯಕ್ಷರಾಗಿ ಆಯ್ಕೆಯಾಗುವುದೂ ಖಚಿತವಾಗಿತ್ತು. ಅಲ್ಲದೇ, ಕಾಂಗ್ರೆಸ್ ಸದಸ್ಯರುಗಳೂ ಸಹ ತಂಝೀಮ್ ಅಭ್ಯರ್ಥಿಗಳನ್ನು ಬೆಂಬಲಿಸುವ ನಿರೀಕ್ಷೆಯೂ ಇತ್ತು. ಅದರಂತೆ ಗುರುವಾರ ತಂಝೀಮ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದರ ಜತೆಗೆ ತಂಝೀಮ್ ಬೆಂಬಲಿತರೇ ಆಗಿದ್ದ ಅಬ್ದುರ್ರಹೀಂ, ಕಾಂಗ್ರೆಸ್‌ನ ನಾಗರಾಜ ನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಲಕ್ಷ್ಮೀ ಮಾದೇವ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ನಾಯ್ಕ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದರಿಂದ ತಂಝೀಮ್ ಬೆಂಬಲಿತರೇ ಆದ ಅಬ್ದುರ್ರಹೀಂ ಹಾಗೂ ಇಮ್ರಾನ್ ಲಂಕಾ ನಡುವೆ ಚುನಾವಣೆ ನಡೆಯಿತು.
ಸಭೆಯಲ್ಲಿ ಹಾಜರಿದ್ದ ತಂಝಿಮ್ ಬೆಂಬಲಿತ ಪೈಕಿ 7 ಸದಸ್ಯರು ಇಮ್ರಾನ್ ಲಂಕಾ ಪರ ಮತ ಚಲಾಯಿಸಿದರೆ, ಅಬ್ದುರ್ರಹೀಂ ಪರ ಅವರ ಮತವೂ ಸೇರಿ ಕಾಂಗ್ರೆಸ್‌ನ 5 ಸದಸ್ಯರು, ತಂಝೀಮ್ ಬೆಂಬಲಿತ ಇಬ್ಬರು, ಬಿಜೆಪಿ ಹಾಗೂ ಪಕ್ಷೇತರ ಸದಸ್ಯರಿಬ್ಬರ ಮತ ಸೇರಿ ಒಟ್ಟು 10 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ತಮ್ಮ ಬೆಂಬಲ ಸೂಚಿಸಿದ್ದರಿಂದ ಅಬ್ದುರ್ರಹೀಂ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ತಂಝೀಮ್‌ನ ಶಮೀಮ್ ಬಾನು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದರಿಂದ ಕಾಂಗ್ರೆಸ್‌ನ ಲಕ್ಷ್ಮೀ ಮಾದೇವ ನಾಯ್ಕ ಹಾರ್ನಗದ್ದೆ ಅವಿರೋಧವಾಗಿ ಆಯ್ಕೆಯಾದರು. ಶಾಸಕ ಮಂಕಾಳ ವೈದ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್ ವಿ.ಎನ್. ಬಾಡಕರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುರ್ರಹೀಂ ಮಾತನಾಡಿ, ಎಲ್ಲಾ ಸದಸ್ಯರ ಜೊತೆಗೆ ತಂಝೀಮ್‌ನ್ನು ವಿಶ್ವಾಸಕ್ಕೆ ತೆಗದುಕೊಂಡು ಜಾಲಿಪಟ್ಟಣದ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದರಲ್ಲದೇ, ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ತಂಝೀಮ್ ಆಕ್ರೋಶ
ಮೊದಲೇ ತೀರ್ಮಾನಿಸಿದಂತೆ ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುವ ಬದಲು ಬಂಡಾಯವಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಬ್ದುರ್ರಹೀಂ ಅವರ ನಡಾವಳಿಕೆಗೆ ಸ್ಥಳದಲ್ಲೇ ಹಾಜರಿದ್ದ ತಂಝೀಮ್‌ನ ಪದಾಧಿಕಾರಿಗಳು, ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ರಹೀವ್ ಅವರು ಹೊರ ಬರುತ್ತಿದ್ದಂತೆ ಅವರು ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಂಝೀಮ್ ಉಪಾಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ಇದೊಂದು ದ್ರೋಹದ ರಾಜಕೀಯ. ಶಾಸಕರು ತಮಗೆ ಬೆಂಬಲ ನೀಡುತ್ತೇವೆಂದು ಹೇಳಿ ಕೊನೆಗೆ ತಮ್ಮ ನಿಲುವನ್ನು ಬದಲಾಯಿಸಿದ್ದು ಬೇಸರವಾಗಿದೆ. ಏನೇ ಆದರೂ ಅಭಿವೃದ್ದಿಯ ದೃಷ್ಟಿಯಿಂದ ತಂಝೀಮ್ ಸಹಕರಿಸುತ್ತದೆ ಎಂದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡ ತಂಝೀಮ್ ಬೆಂಬಲಿತ ಅಭ್ಯರ್ಥಿ ಇಮ್ರಾನ್ ಲಂಕಾ ಮಾತನಾಡಿ, ಅಬ್ದುರ್ರಹೀಂರನ್ನು ನನ್ನ ವಾರ್ಡಿನಿಂದ ಗೆಲ್ಲಿಸಿ ಕಳುಹಿಸಿದ್ದೇನೆ. ಅವರು ಅವರು ಇಲ್ಲಿನ ತಂಝೀವ್ ಸಂಸ್ಥೆಗೆ ದ್ರೋಹ ಬಗೆಯುವ ಕೆಲಸ ಮಡಿದ್ದು ತಂಝೀಮ್ ನಿರ್ಣಯ ಧಿಕ್ಕರಿಸಿ ರಾಜಕೀಯ ಮಾಡಿದ್ದಾರೆ. ನನಗೆ ತಂಝಿಮ್‌ನ ವಿಶ್ವಾಸ, ನಂಬಿಕೆ ಸಿಕ್ಕಿದೆ. ನಾನು ವಿರೋಧ ಪಕ್ಷದಲ್ಲಿದುಕೊಂಡು ಅಭಿವೃದ್ದಿಪರ ಕೆಲಸ ಮಾಡುವೆ ಎಂದರು.







