ಉಚ್ಛ ನ್ಯಾಯಾಲಯದ ತಡೆಯಾಜ್ಞೆ ತೆರವು: ಕಟ್ಟಡ ಕಾರ್ಮಿಕರ ಉಪವಾಸ ಸತ್ಯಾಗ್ರಹ ಅಂತ್ಯ

ಉಡುಪಿ, ಸೆ.29: ಮರಳುಗಾರಿಕೆಗೆ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಕಟ್ಟಡ ಕಾರ್ಮಿಕರ ಸಂಘಟನೆಗಳು ಕಳೆದ 4ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.
ಕಳೆದೊಂದು ವರ್ಷದಿಂದೀಚೆಗೆ ತಡೆಯಾಜ್ಞೆಯಿಂದಾಗಿ ಮರಳು ದೊರೆಯದೆ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. 2015ರ ನವೆಂಬರ್ ತಿಂಗಳಲ್ಲಿ ವಿವಿಧ ಸಂಘಟನೆಗಳು ಮರಳು ಸಮಸ್ಯೆಯನ್ನು ಬಗೆಹರಿಸುವಂತೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತತ ನಾಲ್ಕು ದಿನಗಳ ಕಾಲ ಅನಿರ್ದಿಷ್ಟಾವದಿ ಧರಣಿ ಸತ್ಯಾಗ್ರಹ ನಡೆಸಿದ್ದವು.
ಆ ವೇಳೆಯಲ್ಲಿ ಉಸ್ತುವಾರಿ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ ಹಾಗು ಅಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಮರಳು ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಮರಳನ್ನೇ ಅವಲಂಬಿಸಿದ್ದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದರು. ಸಮಸ್ಯೆಗೆ ಪರಿಹಾರ ಲಭಿಸದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು ಅನಿವಾರ್ಯವಾಗಿ ತಮ್ಮ ಸಂಘಗಳ ನೇತೃತ್ವದಲ್ಲಿ ಮರಳು ಸಮಸ್ಯೆ ಬಗೆಹರಿಸಲು, ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಒತ್ತಡ ತರಲು ಸೆ.26ರಿಂದ ಅನಿರ್ದಿಷ್ಟಾವದಿ ಸರದಿ ಉಪವಾಸಕ್ಕೆ ಕರೆ ನೀಡಿದ್ದರು. ಸತ್ಯಾಗ್ರಹ ಆರಂಭವಾದ 4ದಿನಗಳ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದೆ.
ತಡೆಯಾಜ್ಞೆ ತೆರವುಗೊಂಡ ಸುದ್ದಿಯನ್ನು ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಧರಣಿ ನಿರತರಿಗೆ ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಕಟ್ಟಡ ಕಾರ್ಮಿಕರು ಘೋಷಣೆ ಕೂಗುತ್ತ ಸ್ಥಳದಲ್ಲೆ ಸಿಹಿಯನ್ನು ಹಂಚಿ ವಿಜಯೋತ್ಸವ ಆಚರಿಸಿದರು. ಬಳಿಕ ಉಡುಪಿ ಕ್ಲಾಕ್ ಟವರ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.







