ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು
ಪ್ರಕರಣದಿಂದ ಹಿಂದೆ ಸರಿದ ಗಣಪತಿ ಪುತ್ರ ನೇಹಾಲ್

ಮಡಿಕೇರಿ ಸೆ.29: ಆತ್ಮಹತ್ಯೆ ಮಾಡಿಕೊಂಡಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನಡೆಸಿದ ತನಿಖಾ ವರದಿಯ ಬಿ ರಿಪೋರ್ಟ್‌ಗೆ ಗಣಪತಿ ಅವರ ಪುತ್ರ ನೆೇಹಾಲ್ ಗಣಪತಿ ಸಮ್ಮತಿ ಸೂಚಿಸುವ ಮೂಲಕ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಆದರೆ ಗಣಪತಿ ಅವರ ತಂದೆ, ತಾಯಿ, ಸಹೋದರ ಹಾಗೂ ಸಹೋದರಿ ಸೇರಿದಂತೆ ನಾಲ್ವರು ತಮ್ಮನ್ನು ಪ್ರಕರಣದ ಪಿರ್ಯಾದಿದಾರರನ್ನಾಗಿ ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಆ ಮೂಲಕ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ವಿಚಾರಣೆಯನ್ನು ಅ.24 ಕ್ಕೆ ಮುಂದೂಡಲಾಗಿದೆ.
ಗಣಪತಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ತನಿಖೆ ನಡೆಸಿ, ಇದೇ ಸೆ.17 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ಬಗ್ಗೆ ಸೆ.19 ರಂದು ವಿಚಾರಣೆ ನಡೆಸಿದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಜೆಎಂಎಫ್‌ಸಿ ನ್ಯಾಯಾಲಯ ಆಕ್ಷೇಪಣೆ ಸಲ್ಲಿಕೆಗೆ ಸೆ. 29 ರ ವರೆಗೆ ದಿನ ನಿಗದಿಪಡಿಸಿತ್ತು. ಇದರ ಅನ್ವಯ ಗುರುವಾರ ಡಿವೈಎಸ್ಪಿ ಗಣಪತಿ ಅವರ ಪುತ್ರ ನೇಹಾಲ್ ಗಣಪತಿ, ಅವರು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವಕೀಲ ಪ್ರಸನ್ನ ಕುಮಾರ್ ಅವರ ಮೂಲಕ ಸಿಐಡಿ ತಂಡ ನೀಡಿರುವ ವರದಿಗೆ ಸಮ್ಮತಿಯನ್ನು ಸೂಚಿಸಿದರು. ಪ್ರಕರಣದಲ್ಲಿ ಮುಂದುವರಿಯುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಇಷ್ಟಕ್ಕೇ ಪ್ರಕರಣ ಮುಗಿಯಿತು ಎನ್ನುವಷ್ಟರಲ್ಲಿ ಗಣಪತಿ ಅವರ ಕುಟುಂಬ ವರ್ಗ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಹೊಸ ತಿರುವನ್ನು ನೀಡಿದೆ. ಗಣಪತಿ ಅವರ ತಂದೆ ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರು, ಒಟ್ಟು ಪ್ರಕರಣದಲ್ಲಿ ತಮ್ಮನ್ನು ಪಿರ್ಯಾದಿದಾರರನ್ನಾಗಿ ಪರಿಗಣಿಸುವಂತೆ ವಕೀಲರಾದ ಸುಮಂತ್ ಪಾಲಾಕ್ಷ ಅವರ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
ಸಿಐಡಿ ವರದಿಗೆ ನೇಹಾಲ್ ಗಣಪತಿ ಸಮ್ಮತಿ ಸೂಚಿಸಿ ಮತ್ತು ಅದಕ್ಕೆ ವಿರುದ್ಧವಾಗಿ ನಾಲ್ವರು ತಮ್ಮನ್ನು ಪಿರ್ಯಾದಿದಾರರನ್ನಾಗಿ ಪರಿಗಣಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು, ವಿಚಾರಣೆಯನ್ನು ಅ.24 ಕ್ಕೆ ಮುಂದೂಡಿ ಆದೇಶವನ್ನು ನೀಡಿದರು.
ಶಿಕ್ಷಣವೇ ಮುಖ್ಯವೆಂದ ನೇಹಾಲ್
ಸುದ್ದಿಗಾರರೊಂದಿಗೆ ಮಾತನಾಡಿದ ನೇಹಾಲ್ ಗಣಪತಿ ತನಗೆ ಶಿಕ್ಷಣವನ್ನು ಮುಂದುವರಿಸಬೇಕಾಗಿರುವುದರಿಂದ ಪ್ರಕರಣದ ಬಗ್ಗೆ ಹೆಚ್ಚು ಸಮಯ ವ್ಯಯಿಸಲು ಸಾಧ್ಯವಾಗುವುದಿಲ್ಲವೆಂದು ಸ್ಪಷ್ಟಪಡಿಸಿದರು.
ನೇಹಾಲ್ ಗಣಪತಿ ಪರ ವಕೀಲರಾದ ಪ್ರಸನ್ನ ಕುಮಾರ್ ಮಾತನಾಡಿ, ಸಿಐಡಿ ತನಿಖಾ ವರದಿಯನ್ನು ಒಪ್ಪಿಕೊಳ್ಳುವ ಮೂಲಕ ಪ್ರಕರಣದಲ್ಲಿ ಮುಂದುವರಿಯುವುದಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಹೋಗಲು ಸಿದ್ಧ
ಡಿವೈಎಸ್ಪಿ ಗಣಪತಿ ಅವರ ತಂದೆ ಕುಶಾಲಪ್ಪ ಮಾತನಾಡಿ, ನ್ಯಾಯಕ್ಕಾಗಿ ಸರ್ವೋಚ್ಚ ನ್ಯಾಯಾಲಯದವರೆಗೆ ಹೋಗಲು ಸಿದ್ಧ ಎಂದರು. ತಮ್ಮ ಮಗನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಸಮರ್ಪಕವಾದ ತನಿಖೆ ನಡೆದಿಲ್ಲ. ತನಿಖಾ ವರದಿಯಲ್ಲಿ ಡಿವೈಎಸ್ಪಿ ಗಣಪತಿ ಅವರ ಮೊಬೈಲ್, ಲ್ಯಾಪ್ ಟಾಪ್, ಎಟಿಎಂ ಕಾರ್ಡ್‌ಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ತನಿಖೆಯನ್ನು ವ್ಯವಸ್ಥಿತವಾಗಿ ನಡೆಸಿಲ್ಲವೆಂದು ಕುಶಾಲಪ್ಪ ಆರೋಪಿಸಿದರು.
ಗಣಪತಿ ಅವರ ಸಹೋದರ ಮಾಚಯ್ಯ ಮಾತನಾಡಿ, ಅಂತಿಮ ನಿರ್ಧಾರವನ್ನು ವ್ಯಕ್ತಪಡಿಸಲು ಗಣಪತಿ ಅವರ ಪುತ್ರ ನೇಹಾಲ್ ತಮ್ಮನ್ನು ಸಂಪರ್ಕಿಸಿಲ್ಲವೆಂದು ಸ್ಪಷ್ಟಪಡಿಸಿದರು.
ಪ್ರಕರಣದ ಬಗ್ಗೆ ಕುತೂಹಲಭರಿತರಾಗಿದ್ದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದರು.







