ನದಿಗೆ ಹಾರಿದ ಯುವತಿಗಾಗಿ ಮುಂದುವರಿದ ಹುಡುಕಾಟ

ಬ್ರಹ್ಮಾವರ, ಸೆ.29: ಕಲ್ಯಾಣಪುರ ಸೇತುವೆಯಿಂದ ಸೆ.28ರ ಸಂಜೆ ವೇಳೆ ಸ್ವರ್ಣ ನದಿಗೆ ಹಾರಿ ನಾಪತ್ತೆಯಾಗಿರುವ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಚಂದ್ರಶೇಖರ್ ಎಂಬವರ ಮಗಳು ಚೈತ್ರಾ(18)ಳಿಗಾಗಿ ಇಂದು ಸಂಜೆಯವರೆಗೆ ಕೂಡ ಹುಡುಕಾಟ ಮುಂದುವರೆಸಲಾಗಿದೆ.
ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಸೇತುವೆ ಕೆಳಗೆ, ಹೊನ್ನಾಳ ಹೊಳೆ ಗಳಲ್ಲಿ ಬ್ರಹ್ಮಾವರ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ದೋಣಿಯಲ್ಲಿ ಚೈತ್ರಾಳಿಗಾಗಿ ಹುಡುಕಾಟ ನಡೆಸಿದರು. ಆದರೆ ಸಂಜೆಯವರೆಗೆ ಆಕೆಯ ದೇಹ ಪತ್ತೆಯಾಗಿಲ್ಲ.
ಅಂಬಲಪಾಡಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಕೆ, ನಿನ್ನೆ ಸಂಜೆ ಮೊಬೈಲ್‌ನಲ್ಲಿ ಮಾತನಾಡುತ್ತ ಒಮ್ಮೆಲೆ ಮೊಬೈಲ್ ಹಿಡಿದುಕೊಂಡು ಸೇತುವೆಯಿಂದ ನದಿಗೆ ಹಾರಿದ್ದಾಳೆ. ಇದಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ. ಪೊಲೀಸರು ಆಕೆ ತನ್ನ ಮೊಬೈಲ್‌ನಲ್ಲಿ ಕೊನೆಯ ಕರೆ ಯಾರಿಗೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Next Story





