ಸೊರಬ: ಪೌರಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಲು ಶಾಸಕರ ಕರೆ
ಪೌರ ಕಾರ್ಮಿಕರ ದಿನಾಚರಣೆ

ಸೊರಬ, ಸೆ.29: ಕೇವಲ ಭಾಷಣಗಳಿಂದ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಬದಲಾಗಿ ಭರವಸೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದೆ ಎಂದು ಶಾಸಕ ಮಧು ಬಂಗಾರಪ್ಪಹೇಳಿದರು.
ಪಟ್ಟಣದ ಲಯನ್ಸ್ ಕಲ್ಯಾಣ ಮಂದಿರದಲ್ಲಿ ಪಪಂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಸೊರಬ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಕೆಲಸ ಕಷ್ಟಕರವಾಗಿದ್ದು, ನಿರಂತರ ಮತ್ತು ಅತಿ ಆವಶ್ಯಕವಾದ ಕೆಲಸವಾಗಿದೆ. ಇವರ ಕೆಲಸ ನೇರವಾಗಿ ಸಾರ್ವಜನಿಕರ ಮೇಲೆ ಸತ್ಪರಿಣಾಮ ಬೀರಲಿದ್ದು, ನಾಗರಿಕರು ಅವರನ್ನು ಗೌರವದಿಂದ ಕಾಣುವ ಜೊತೆಗೆ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದರು. ಸಾಮಾಜಿಕ ಚಿಂತಕ ಟಿ.ರಾಜಪ್ಪ ಮಾಸ್ತರ್ ಮಾತನಾಡಿ, ತಮ್ಮ ಆರೋಗ್ಯದ ಬಗ್ಗೆ ಯೋಚನೆ ಮಾಡದೆ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿದೆ. ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಾವುಗಳು ಪೌರ ಕಾರ್ಮಿಕರನ್ನು ಕೀಳರಿಮೆಯಿಂದ ಕಾಣುವುದನ್ನು ಬಿಡಬೇಕು. ಪ್ರಸ್ತುತ ಮುಂದುವರಿದ ಕಾಲಘಟ್ಟದಲ್ಲಿ ದೇಶದ ಕೆಲವು ಪ್ರದೇಶಗಳಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದ್ದು, ಅದನ್ನು ತಪ್ಪಿಸುವಲ್ಲಿ ಹಿಂದೆಬಿದ್ದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಕೇವಲ ಕಸಮರಿಗೆ ಹಿಡಿದು ಫೋಟೊ ತೆಗೆಸಿಕೊಂಡರೆ ಸ್ವಚ್ಛ ಭಾರತ ಆಗಲು ಸಾಧ್ಯವಿಲ್ಲ. ಪೌರ ಕಾರ್ಮಿಕರಿಗೆ ಭೂಮಿ, ಶಿಕ್ಷಣ ಹಾಗೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಸರಕಾರಗಳು ಚಿಂತನೆ ನಡೆಸಬೇಕು. ಅಭದ್ರತೆಯ ನಡುವೆ ಜೀವನ ಸಾಗಿಸುತ್ತಿರುವ ಇವರಿಗೆ ಭದ್ರ ನೆಲೆ ಕಲ್ಪಿಸಬೇಕು. ದುಶ್ಚಟಗಳಿಂದ ದೂರ ಸರಿದು ಕೀಳಾಗಿ ಕಾಣುವ ನಿಮ್ಮ ವೃತ್ತಿಗೆ ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಮೂಲಕ ಸಮಾಜದಲ್ಲಿ ತಲೆಯೆತ್ತಿ ನಿಲ್ಲಬೇಕು ಎಂದು ಕರೆನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಆರ್.ಲೋಕೇಶ್ ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದಭರ್ದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಬಹುಮಾನ ಮತ್ತು ಉಡುಗೊರೆ ವಿತರಿಸಲಾಯಿತು.ಪಪಂ ಅಧ್ಯಕ್ಷೆ ಬೀಬಿ ಝುಲೇಖಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದಭರ್ದಲ್ಲಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ, ಪಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಮೆಹಬೂಬಿ, ಎಂ.ಡಿ.ಉಮೇಶ್, ಪ್ರಶಾಂತ್ ಮೇಸ್ತ್ರಿ, ಮಹೇಶ್ ಗೌಳಿ, ಷಣ್ಮುಖ, ಮುಖ್ಯಾಧಿಕಾರಿ ಬಾಲಚಂದ್ರ ಮತ್ತು ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.







