ಕೃಷಿಗೆ ಹೆಚ್ಚು ಒತ್ತು ನೀಡಿ: ಮಹೇಶ್ ಗಣಪತಿ: ಅಚ್ಚಪಂಡ ಮಹೇಶ್ ಗಣಪತಿ
‘ಕೃಷಿ ವಿಚಾರ ಸಂಕಿರಣ’

ವೀರಾಜಪೇಟೆ, ಸೆ.29: ಕೃಷಿ ಭೂಮಿಯನ್ನೇ ನಂಬಿ ಬದುಕುತ್ತಿರುವ ಕೊಡಗಿನ ಗ್ರಾಮೀಣ ಪ್ರದೇಶದ ಜನರು ತಮ್ಮ ಕೃಷಿ ಭೂಮಿಯನ್ನು ಪಾಳು ಬಿಡದೆ ಕೃಷಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ಸ್ನೇಹಿತರ ಬಳಗ ತೋರ ಇವುಗಳ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ಸಮಿಪದ ತೋರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ‘ಕೃಷಿ ವಿಚಾರ ಸಂಕಿರಣ’ದಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಈ ಗ್ರಾಮಕ್ಕೆ ಬಸ್ಸುಗಳೇ ಬಾರದಿರುವ ಸಂದರ್ಭ ನಾವು ಬೆಳೆದ ವಸ್ತುಗಳನ್ನು ಹೊತ್ತುಕೊಂಡು ಹೋಗಿ ಮಾರಾಟ ಮಾಡುತಿದ್ದೆವು. ಆದರೆ, ಇಂದು ಎಲ್ಲ ಸವಲತ್ತುಗಳಿದ್ದರೂ ಕೃಷಿ ಭೂಮಿಯನ್ನು ಪಾಳುಬಿಡುತ್ತಿರುವುದು ಸರಿಯಲ್ಲ. ಪ್ರತಿಯೊಬ್ಬರು ತಮ್ಮ ಕೃಷಿ ಭೂಮಿಯಲ್ಲಿ ಸಾಧ್ಯವಾದಷ್ಟು ಭತ್ತ, ತರಕಾರಿ, ಬಾಳೆ, ಉಪಯೋಗಕ್ಕೆ ಬೇಕಾಗುವಂತಹ ಇತರ ವಸ್ತುಗಳನ್ನು ಬೆಳೆಯುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಥಳೀಯ ತಾಪಂ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪಮಾತನಾಡಿ, ಕೃಷಿ ಭೂಮಿ ಮಾನವನಿಗಿರುವ ಅವಿಭಾಜ್ಯ ಅಂಗ. ಕೊಡಗಿನ ಕೃಷಿ ಭೂಮಿಯನ್ನು ಯಾರೂ ಮಾರಾಟ ಮಾಡಬೇಡಿ. ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಂಡಿರುವ ವಿಚಾರ ಸಂಕಿರಣ ರೈತರಿಗೆ ಉಪಕಾರಿಯಾಗಿದ್ದು, ಇನ್ನೂ ಹೆಚ್ಚು ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಯೋಜನಾಧಿಕಾರಿ ಸದಾಶಿವ ಗೌಡ ಮಾತನಾಡಿ, ಕೊಡಗಿನ ಕೃಷಿ, ಆಚಾರ-ವಿಚಾರಗಳು ದೇಶದಲ್ಲೇ ಹೆಸರು ಗಳಿಸಿದೆ. ಗ್ರಾಮಿಣ ಪ್ರದೇಶದಲ್ಲಿ ಕೃಷಿಗೆ ಮಹತ್ವವಿದ್ದು, ಯೋಜನೆ ವತಿಯಿಂದ ನಡೆಸುವ ಕೃಷಿ ವಿಚಾರ ಸಂಕಿರಣದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.
ಸಭೆೆಯ ಅಧ್ಯಕ್ಷತೆಯನ್ನು ಪ್ರಗತಿಬಂಧು ಸ್ವ-ಸಹಾಯ ಸಂಘದ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಗೋಣಿಕೊಪ್ಪಲು ತೋಟಗಾರಿಕೆ ವಿಭಾಗದ ಡಾ. ವೀರೇಂದ್ರ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಪಾಪಯ್ಯ, ಸ್ನೇಹಿತರ ಬಳಗದ ಅಧ್ಯಕ್ಷ ಮುದ್ದಪ್ಪ ಮಾತನಾಡಿದರು.
ಯೋಜನೆಯ ಕೃಷಿ ಅಧಿಕಾರಿ ಎಂ.ಎಂ. ಕುಶಾಲಪ್ಪ ಸ್ವಾಗತಿಸಿದರು. ಮೇಲ್ವಿಚಾರಕ ಎಸ್.ರವೀಂದ್ರ ನಿರೂಪಿಸಿದರು. ಬಿ.ಆರ್. ಸರಿತಾ ವಂದಿಸಿದರು. ವಿಚಾರ ಸಂಕಿರಣದಲ್ಲಿ 32 ಸ್ವ-ಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು, ಕೃಷಿಕರು ಭಾಗವಹಿಸಿದ್ದರು.







