ನೆರಳು ರಹಿತ ಕಾಫಿ ಕೃಷಿಗೆ ಬೆಳೆಗಾರರ ಒಕ್ಕೂಟ ವಿರೋಧ

ಮಡಿಕೇರಿ, ಸೆ.29: ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗಾರರು ಸಾಂಪ್ರದಾಯಿಕ ಕಾಫಿ ಕೃಷಿ ಪದ್ಧತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಕಾಫಿ ತೋಟದ ಮರಗಳನ್ನು ಸಂಪೂರ್ಣವಾಗಿ ಕಡಿದು ನೆರಳು ರಹಿತ ಕಾಫಿ ಕೃಷಿಗೆ ಮುಂದಾಗಿದ್ದಾರೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೊಡಗು ಜಿಲ್ಲಾ ಬೆಳೆಗಾರರ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಳೆೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾ ಬೆಳ್ಯಪ್ಪ, ನೆರಳು ರಹಿತ ಕಾಫಿ ಕೃಷಿಯನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು. ಭಾರತದ ಕಾಫಿ ಕೃಷಿ ಪರಿಸರ ಸ್ನೇಹಿಯಾಗಿದ್ದು, ಕಾಫಿ ತೋಟಗಳು ಜೀವ ವೈವಿಧ್ಯಗಳ ತಾಣವಾಗಿದೆ. ಈ ಹಿಂದಿನಿಂದಲೂ ಪ್ರಕೃತಿಯ ನೈಜತೆಯನ್ನು ಕಾಪಾಡಿಕೊಂಡು ಕಾಫಿ ಕೃಷಿ ಮಾಡುವ ಮೂಲಕ ಆರ್ಥಿಕ ಲಾಭ ಹೊಂದುವುದರೊಂದಿಗೆ ಪ್ರಕೃತಿಯನ್ನು ಉಳಿಸಿ ಬೆಳೆಸಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ದುರಾಸೆಗೆ ಒಳಗಾಗಿರುವ ಕೆಲವು ಬೆಳೆಗಾರರು ಮರಗಳನ್ನು ಕಡಿದು ಕಾಫಿ ತೋಟಗಳನ್ನು ನೆರಳು ರಹಿತಗೊಳಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಪ್ರಾಕೃತಿಕ ಅಸಮತೋಲನ ಉಂಟಾಗುವುದಲ್ಲದೆ, ಕಾಂಡ ಕೊರಕದ ಹಾವಳಿ, ಬೆರ್ರಿ ಬೋರರ್ ಸೇರಿದಂತೆ ಇನ್ನಿತರ ಸಮಸ್ಯೆಗಳು ಹೆಚ್ಚಾಗಲಿವೆ. ಅಲ್ಲದೆ, ಜೀವ ವೈವಿಧ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ನಂದಾ ಬೆಳ್ಯಪ್ಪಆತಂಕ ವ್ಯಕ್ತಪಡಿಸಿದರು.
ಒಕ್ಕೂಟದ ಸಂಚಾಲ ಕೆ.ಕೆ. ವಿಶ್ವನಾಥ್ ಮಾತನಾಡಿ, ಕಾಡಾನೆ ದಾಳಿ ಸಂದರ್ಭ ಕೃಷಿ ಫಸಲಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ರಾಜ್ಯ ಸರಕಾರ ದ್ವಿಗುಣಗೊಳಿಸಿದೆ. ಇದು ಸ್ವಾಗತಾರ್ಹವಾಗಿದ್ದರೂ ಕಾಫಿ ಬೆಳೆಗಾರರಿಗೆ ಮಾತ್ರ ಒಂದು ಕಾಫಿ ಗಿಡಕ್ಕೆ 100 ರೂ.ನಿಂದ 200 ರೂ.ಗೆ ಏರಿಕೆ ಮಾಡಿ ಅಲ್ಪಮೊತ್ತದ ಪರಿಹಾರ ಘೋಷಿಸಿದೆ. ಇದು ಅತ್ಯಂತ ಕಡಿಮೆ ಮೊತ್ತವಾಗಿದೆಯೆಂದು ಅಭಿಪ್ರಾಯಪಟ್ಟ ಅವರು, ಕಾಡಾನೆ ಹಾವಳಿ ತಡೆಗೆ ಸರಕಾರ ಶಾಶ್ವತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ನಾಳೆ ರಾಜಾಸೀಟಿನಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನ ಆಚರಣೆ
ಬೆಳೆೆಗಾರರ ಸಂಘದ ಅಧ್ಯಕ್ಷ ನಂದಿ ನೆರವಂಡ ದಿನೇಶ್ ಮಾತನಾಡಿ, ಮಡಿಕೇರಿಯ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದೊಂದಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ಮತ್ತು ಕೊಡಗು ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ಅ.1 ರಂದು ಮಧ್ಯಾಹ್ನ 3 ಗಂಟೆಗೆ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ನಡೆಯಲಿದೆ. ಕಾಫಿ ಸೇವನೆ, ಅದರ ಪ್ರಯೋಜನ ಮತ್ತು ಕಾಫಿ ತಯಾರಿಸುವ ವಿಧಾನದ ಕುರಿತು ರಾಜಾಸೀಟಿಗೆ ಆಗಮಿಸುವ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಜಿ ಪಂ ಅಧ್ಯಕ್ಷ ಬಿ.ಎ. ಹರೀಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ರೋಟರಿ ಮಿಸ್ಟಿ ಹಿಲ್ಸ್‌ನ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಶಿವಶಂಕರ್ ಹಾ
ಗೂ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಂದ್ರ ಉಪಸ್ಥಿತರಿದ್ದರು.







