ದಲಿತರು ಮತ್ತು ರಾಜಕೀಯ ಪ್ರಜ್ಞೆ

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವ
ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ. ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖೀರಾಜ್ಯವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಾಧಿಸಬಲ್ಲ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು. ಈ ದೇಶದ ಒಟ್ಟಾರೆ ಸಮುದಾಯವನ್ನು ಸಮಾನತೆಯ ಹಾದಿಯಲ್ಲಿ ಕೊಂಡೊಯ್ಯಬೇಕೆಂಬ ಆಶಯ ಹೊಂದಿದ್ದರು. ಪ್ರಜಾಪ್ರಭುತ್ವವೆಂದರೆ ಸರಕಾರದ ಒಂದು ರೂಪವೆಂದು, ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಪ್ರಜಾಪ್ರಭುತ್ವವು ಕೇವಲ ಸರಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ಮೇಲೈಸುವ ಒಂದು ಜೋಡಣೆ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ ''ಸಾಮಾಜಿಕ ಪ್ರಜಾಪ್ರಭುತ್ವ''ದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ. ಸಮಾನತೆ ಮತ್ತು ಸ್ವಾತಂತ್ರ್ಯ ಹೀಗೆ ಅದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ 'ಆರ್ಥಿಕ ಪ್ರಜಾಪ್ರಭುತ್ವ' ಎನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರರ ಪ್ರಜಾಪ್ರಭುತ್ವವು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಅವಕಾಶ ನೀಡಬೇಕೆಂಬ ಹಂಬಲ ಹೊಂದಿದೆ. ನಮ್ಮ ದೇಶದಲ್ಲಿ ನೂರು ಕೋಟಿ ಜನರಿದ್ದಾರೆ ಆದರೂ ಏಕೆ ದಲಿತ ಭಾಷೆ, ದಲಿತ ಸಂವೇದನೆ ಅನ್ನೋದು ಮೇಲ್ಪದರಕ್ಕೆ ಬರುತ್ತಿಲ್ಲವೆನ್ನುವ ವಿಚಾರ ಪ್ರಸ್ತಾಪಿಸಿದರೆ ಇದಕ್ಕೆ ಬಹುತೇಕ ಕಾರಣ ಬಡತನ, ಅನರಕ್ಷತೆ. ಹಾಗಾಗಿ ಇಂತಹ ಎಲ್ಲಾ ಒತ್ತಡಗಳ ನಡುವೆ ಭಾರೀ ಜನಸಮುದಾಯವನ್ನು ಹೊಂದಿರುವ ಈ ದಲಿತ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಕಷ್ಟು ಪ್ರಯತ್ನಗಳು ಆಗಬೇಕಾಗಿದೆ ಮತ್ತು ಶಾಸ್ತ್ರೀಯ ಅಧ್ಯಯನಗಳೂ ಆಗಬೇಕಾಗಿದೆ.
ಭಾರತದ ದಲಿತ ರಾಜಕಾರಣ
ಸ್ವಾತಂತ್ರಾನಂತರ ಕಾಂಗ್ರೆಸ್ ಸರಕಾರದ ಆಡಳಿತದ ಅವಧಿಯಲ್ಲಿ ಐದು ಪ್ರಧಾನ ಮಂತ್ರಿಗಳು ಬ್ರಾಹ್ಮಣರಾಗಿದ್ದರು. ಕಾಂಗ್ರೆಸ್ಸೇತರ ಪಕ್ಷಗಳ ಅಧಿಕಾರವಿದ್ದಾಗ ಇಬ್ಬರು ಬ್ರಾಹ್ಮಣ ಮತ್ತು ಇಬ್ಬರು ರಜಪೂತ ಪ್ರಧಾನ ಮಂತ್ರಿಗಳಾಗಿದ್ದರು. ಇಬ್ಬರು ಪ್ರಧಾನ ಮಂತ್ರಿಗಳು ಶೂದ್ರರಾಗಿದ್ದರು. ಸ್ವಾತಂತ್ರಾನಂತರದ ಭಾರತದಲ್ಲಿ ಅಂದರೆ 1952ರಿಂದ 1989ರವರೆಗೆ ದಲಿತರು ಮತ್ತು ಕಾಂಗ್ರೆಸ್ ನಡುವಿನ ಬಾಂಧವ್ಯ ಗಟ್ಟಿಗೊಳ್ಳತೊಡಗಿತು ಮತ್ತು 1977ರ ಸಾರ್ವತ್ರಿಕ ಚುನಾವಣೆಯನ್ನು ಹೊರತುಪಡಿಸಿದರೆ ದಲಿತರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಆಗಿದ್ದರು. ಪ್ರತಿಭಾವಂತ ಮತ್ತು ಚೈತನ್ಯಶೀಲ ದಲಿತ ರಾಜಕಾರಣಿಯಾಗಿದ್ದ ಯೋಗೇಂದ್ರ ಮಕ್ವಾನ ಅವರು ತಳಸಮುದಾಯಗಳ ಬದುಕನ್ನು ಕಾಂಗ್ರೆಸ್ ರಾಜಕಾರಣದೊಂದಿಗೆ ಹೇಗೆ ಬೆಸೆಯಬೇಕೆಂಬುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಕಾರಣಕ್ಕಾಗಿಯೇ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರೂ ರಾಜಕೀಯವಾಗಿ ಅವರಿಗೆ ಪ್ರಾಮುಖ್ಯತೆ ದಕ್ಕಲೇ ಇಲ್ಲ. ಆದರೆ ಇವರ ಸಮಕಾಲೀನರಾದ ಬೂಟಾಸಿಂಗ್ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ನಾಯಕತ್ವದ ಅಡಿಯಲ್ಲಿ ಗೃಹಮಂತ್ರಿಗಳಾಗಿ ನಂ 2 ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ್ದರು. ಬಾಬು ಜಗಜೀವನ ರಾಂ ಅವರು ದಲಿತ ನಾಯಕರಾಗಿ ಮತ್ತು ಸಮರ್ಥ ಕೇಂದ್ರ ಮಂತ್ರಿಯಾಗಿ ವೈಯಕ್ತಿಕ ನೆಲೆಯಲ್ಲಿ ಜನಪ್ರಿಯತೆಯನ್ನು ಹೊಂದಿದ್ದರು. ನೆಹರೂ ಮಂತ್ರಿಮಂಡಲದಲ್ಲಿ ರಕ್ಷಣಾ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. 1979ರ ಚರಣಸಿಂಗ್ ಸರಕಾರದಲ್ಲಿ ಉಪಪ್ರಧಾನ ಮಂತ್ರಿಗಳಾಗಿದ್ದರು. ಜಗಜೀವನ ರಾಂ ಅವರು ಕಾಂಗ್ರೆಸ್ ಪಕ್ಷದೊಳಗೆ ಸುಮಾರು ಮೂವತ್ತು ವರ್ಷಗಳ ಕಾಲ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ರಾಜಕಾರಣಿಗಳಾಗಿದ್ದರು. ಇದಕ್ಕೆ ಅವರ ವೈಯುಕ್ತಿಕ ಪರಿಶ್ರಮ, ಪ್ರತಿಭೆ ಮತ್ತು ನಿರಂತರ ಜನಸಂಪರ್ಕದ ಚಟುವಟಿಕಗಳು ಕಾರಣವಾಗಿದ್ದರೆ ಕಾಂಗ್ರೆಸ್‌ನೊಂದಿಗಿನ ಸುದೀರ್ಘ ಒಡನಾಟದಲ್ಲಿ ಪಕ್ಷದೊಳಗೆ ಯಾವುದೇ ಬಗೆಯ ಭಿನ್ನಮತೀಯ ರಾಜಕಾರಣಕ್ಕೆ ಕೈ ಹಾಕಲಿಲ್ಲ ಮತ್ತು ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲ ಮತ್ತು ಮಹತ್ವಾಕಾಂಕ್ಷೆ ರಾಜಕಾರಣಕ್ಕೆ ಕಡಿವಾಣ ಹಾಕಿದ್ದರು ಎನ್ನುವ ಅಂಶಗಳೂ ಸಹ ಪ್ರಮುಖ ಕಾರಣಗಳು. 1934ರಲ್ಲಿ ಪಂಜಾಬಿ ಚಮಾರ್ ಸಮುದಾಯದಲ್ಲಿ ಜನಿಸಿದ ಕಾನ್ಶೀರಾಂ ಅವರು ನೇರವಾಗಿ ಅಸ್ಪೃಶ್ಯತೆಯ ದೌರ್ಜ್ಯನ್ಯಕ್ಕೆ ಒಳಗಾಗದಿದ್ದರೂ 1965ರಲ್ಲಿ ಅಂಬೇಡ್ಕರ್ ಜನ್ಮದಿನದಂದು ಅಂಗೀಕಾರವಾಗಿದ್ದ ಸರಕಾರಿ ರಜೆಯನ್ನು ರದ್ದು ಮಾಡುವ ಆದೇಶದ ವಿರುದ್ಧವಾಗಿ ಪರಿಶಿಷ್ಟ ಜಾತಿಯ ಸರಕಾರಿ ನೌಕರರು ಹೋರಾಟ ನಡೆಸುತ್ತಿದ್ದಾಗ ಈ ಹೋರಾಟಕ್ಕೆ ಪ್ರತ್ಯಕ್ಷವಾಗಿ ಸಾಕ್ಷಿಯಾಗಿದ್ದ ಕಾನ್ಶೀರಾಂ ಮೊಟ್ಟ ಮೊದಲ ಬಾರಿಗೆ ಪರಿಶಿಷ್ಟ ಜಾತಿಗಳ ಶೋಷಣೆಯ ಅನುಭವಕ್ಕೆ ಒಳಗಾದರು. ನಂತರ ಅಂಬೇಡ್ಕರ್ ಅವರ ''ಅ್ಞ್ಞಜಿಜ್ಝಿಠಿಜಿಟ್ಞ ಟ್ಛ ಇಠಿಛಿ'' ಪುಸ್ತಕವನ್ನು ಓದಿದಾಗ ಅವರಿಗೆ ಇಂಡಿಯಾದ ಜಾತಿಪದ್ಧತಿಯ ಕ್ರೂರತೆ ಆಳವಾಗಿ ಕಲುಕಿತು. ಈ ಕಾರಣದಿಂದ ಭಾರತದ ರಾಜಕಾರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದರು.
ದಲಿತರ ರಾಜಕೀಯ ಅಸ್ಮಿತೆಯ ಸಮಸ್ಯೆ
ದಲಿತ ಎನ್ನುವುದೇ ಒಂದು ಜಾತಿಯಲ್ಲದಿದ್ದರೂ ಜಾತಿ ಅಸ್ಮಿತೆಯೇ ದಲಿತ ಸಂಘಟನೆಗಳಿಗೆ ಮುಖ್ಯ ಆಧಾರವಾಗಿದೆ. ಜಾತಿಯ ಕಾರಣದಿಂದಾಗಿ ನಾವು ಮುಖ್ಯವಾಹಿನಿಯಿಂದ ಬದಿಗೆ ಸರಿಸಲ್ಪಟ್ಟಿದ್ದೇವೆ ಎನ್ನುವ ಭಾವನೆಯನ್ನು ಹೊಂದಿದ ಜಾತಿಗಳು ದಲಿತ ಅಸ್ಮಿತೆಯನ್ನು ಪಡೆದುಕೊಳ್ಳುತ್ತವೆ. 'ದಲಿತ ಪ್ರಜ್ಞೆ'ಯು ದಲಿತ ಚಳವಳಿಗಳ ಹುಟ್ಟಿಗೆ ಪ್ರಮುಖ ಕಾರಣ ವಾಗಿದೆ. ದಲಿತರಲ್ಲಿ ಈ 'ದಲಿತ ಪ್ರಜ್ಞೆ'ಯನ್ನು ಮೂಡಿಸುವುದು ದಲಿತ ಚಳವಳಿಗಳ ಮುಖ್ಯ ಉದ್ದೇಶವೂ ಆಗಿದೆ. ಹಾಗಿದ್ದರೂ ಬಹುತೇಕ ಸಾಮಾನ್ಯ ದಲಿತರು ತಮ್ಮ 'ಸಾಂಪ್ರದಾಯಿಕ ಪ್ರಜ್ಞೆ'ಯಲ್ಲೆ ಇನ್ನೂ ಇದ್ದಾರೆ ಎಂದು ಚಿಂತಕರು ಹೇಳುತ್ತಾರೆ. ಅಂದರೆ ಇವರ ಪ್ರಕಾರ ಸಾಮಾನ್ಯ ದಲಿತರು ಇನ್ನೂ ತಮ್ಮ ಸಾಂಪ್ರದಾಯಿಕ ಜಾತಿಗಳ ಹೆಸರುಗಳಿಂದಲೇ ಗುರುತಿಸಿಕೊಳ್ಳುತ್ತಾರೆ ವಿನಃ 'ದಲಿತರು' ಎಂದು ಗುರುತಿಸಿಕೊಳ್ಳುವುದಿಲ್ಲ. ದೇಶದ ಸಂಪತ್ತಿನ ಪೈಕಿ ಶೇ. ತೊಂಬತ್ತಕ್ಕೂ ಹೆಚ್ಚು ಪ್ರಮಾಣ ಶೇ. ಐದರಷ್ಟು ಜನರ ಕೈಯಲ್ಲಿದೆ. ಹತ್ತಕ್ಕೂ ಕಡಿಮೆ ಪ್ರಮಾಣದ ಸಂಪತ್ತು ಉಳಿದ ತೊಂಬತ್ತೈದು ಪರ್ಸೆಂಟು ಜನರ ಕೈಯಲ್ಲಿದೆ ಎಂದರೆ ಅದು ಅಸಮಾನತೆ ಅಲ್ಲವೇ? ಹಾಗೆಯೇ ಜಾತಿ ಆಧಾರದ ಮೇಲೆ ದಲಿತರು ಶೇಕಡಾ ಇಪ್ಪತ್ತೆರಡಕ್ಕಿಂತ ಹೆಚ್ಚಿದ್ದಾರೆ. ಆದರೆ ರಾಜ್ಯದಲ್ಲಿ ಇದುವರೆಗೆ ಒಬ್ಬರೂ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಬಿ.ರಾಚಯ್ಯ ಅವರಿರಬಹುದು, ಬಸವಲಿಂಗಪ್ಪ ಇರಬಹುದು, ಖರ್ಗೆ ಇರಬಹುದು, ಪರಮೇಶ್ವರ್ ಇರಬಹುದು. ಹೀಗೆ ಮುಖ್ಯಮಂತ್ರಿ ಪಟ್ಟ ಅವರ್ಯಾರಿಗೂ ಬರಲಿಲ್ಲ. ಅರ್ಥಾತ್, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ದಲಿತರನ್ನು ಸಿಎಂ ಹುದ್ದೆಯ ಮೇಲೆ ಕೂರಲು ಬಿಡುತ್ತಿಲ್ಲ. ಈ ಹಿಂದೆ ದೇವರಾಜ ಅರಸು ಶೋಷಿತ ವರ್ಗಗಳನ್ನು ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ತರುವ ಯತ್ನ ಮಾಡಿದರು. ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿಯಾಗಲಿಲ್ಲ. ಈಗ ದಲಿತರನ್ನು ಒಡೆದು ಆಳುವ ನೀತಿ ಪ್ರಾರಂಭವಾಗಿದೆ. ಸಮಾಜದಲ್ಲಿ ಪರಿವರ್ತನೆ ತರಬೇಕು. ಹಿಂದುಳಿದ ಜಾತಿಗಳ ಪೈಕಿ ಅನೇಕ ಜಾತಿಗಳು ತಮಗೆ ಒಳ ಮೀಸಲಾತಿ ದಕ್ಕಬೇಕು ಎಂದು ಕೂಗು ಹಾಕುತ್ತಿವೆ. ಅದರರ್ಥ ಏನು ಎಂದರೆ ರಾಜಕೀಯ ಹಾಗೂ ಆರ್ಥಿಕ ಸಂಪತ್ತಿನ ವಿಕೇಂದ್ರೀಕರಣ ಸರಿಯಾಗಿ ನಡೆದಿಲ್ಲ ಅಂತ. ಸಿದ್ದರಾಮಯ್ಯ ಅವರ ಕಾಲದಲ್ಲಿ ಜಾತಿವಾರು ಗಣತಿಯಾದರೂ ನಡೆಯುತ್ತಿದೆ. ಆ ಮೂಲಕ ಅವರ ಆರ್ಥಿಕ, ಶೈಕ್ಷಣಿಕ ಸ್ಥಿತಿ ಗತಿಯ ಕುರಿತು ಅರ್ಥವಾಗುತ್ತದೆ.
ದಲಿತರಲ್ಲಿ ರಾಜಕೀಯ ಪ್ರಜ್ಞೆ ಉತ್ತೇಜಿಸಲು ಕೆಲವು ಮಾರ್ಗಗಳು:
• ಹಳ್ಳಿ ಮತ್ತು ಗಲ್ಲಿ ಮಟ್ಟದಲ್ಲಿ ದಲಿತರಿಗೆ ರಾಜಕೀಯ ಜಾಗೃತಿ ಕಾರ್ಯಕ್ರಮಗಳ ಆವಶ್ಯಕತೆಯಿದೆ. ಕಾನೂನಿನಡಿಯಲ್ಲಿ ದಲಿತರು ರಾಜಕೀಯ ಅಧಿಕಾರ ಪಡೆದರೆ ಈ ದೇಶದಲ್ಲಿ ಸೂಚಿತ ಸಮುದಾಯಕ್ಕೆ ಅಧಿಕಾರ ಅನುಭವಿಸುವ ಅವಕಾಶ ಸಂವಿಧಾನದ ಪ್ರಕಾರ ದೊರೆಯುತ್ತದೆ. • ಸ್ಥಳೀಯ ಸರಕಾರಗಳಲ್ಲಿ ಲಾಬಿ ಮಾಡುವುದನ್ನು ಬಿಟ್ಟು ನೈಜವಾಗಿ ಸ್ವಯಂ ಹಿಡಿತದ ಮೇಲೆ ಅಧಿಕಾರ ಹಿಡಿದು ಆಡಳಿತ ಮಾಡುವಂತಹ ರಾಜಕೀಯ ಕೌಶಲ್ಯ ಬೆಳೆಸಬೇಕು.
• ದಲಿತ ಜನಾಂಗದೊಳಗಿನ ವೈರತ್ವವನ್ನು ಹೋಗಲಾಡಿಸುವುದರ ಜೊತೆಗೆ ದಲಿತರೊಳಗಿನ ಒಳಜಗಳಗಳನ್ನು ಕಡಿಮೆಗೊಳಿಸಿ ಅದರಿಂದ ಮೂರನೆಯವರಿಗೆ ಲಾಭವಾಗಿಸುವ ಅವಕಾಶವನ್ನು ತಪ್ಪಿಸಬೇಕು.
• ಸಂವಿಧಾನದ ಪ್ರಕಾರ ದಲಿತರಿಗೆ ದೊರೆಯಬೇಕಾದ ಅವಕಾಶಗಳನ್ನು ನೈಜವಾಗಿ ಮತ್ತು ನೇರವಾಗಿ ಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯವಾಗಬೇಕು ದಲ್ಲಾಳಿಗಳ ಹುಟ್ಟಡಗಿಸಬೇಕು.
• ದಲಿತರಲ್ಲಿ ರಾಜಕೀಯ ಪ್ರಜ್ಞೆಯ ಜೊತೆಗೆ ವ್ಯಾವಹಾರಿಕ ಜ್ಞಾನ ಮೂಡಿಸುವ ಆವಶ್ಯಕತೆಯಿದೆ. ಆಡಳಿತ ಮಾಡುವ, ಆರ್ಥಿಕ ನೀತಿ ರೂಪಿಸುವ ಕೆಲಸವನ್ನು ಇಂದಿನ ಸಮಾಜದಲ್ಲಿ ಅಗತ್ಯವಿದೆ.
• ಅಧಿಕಾರ, ಆಡಳಿತವನ್ನು ಹೆಸರಿಗೆ ಮಾತ್ರ ಪಡೆಯದೆ ಸಂಪೂರ್ಣವಾದ ನೈಜ ಅಧಿಕಾರವನ್ನು ಪಡೆಯುವ ಅವಕಾಶ ಸಿಗುವಂತಾಗಬೇಕು.
• ಈ ದೇಶದ ಇತಿಹಾಸದಲ್ಲಿ ದಲಿತರಿಗೆ ಮಾಡಿರುವ ಅನ್ಯಾಯ ಅಕ್ರಮಗಳು ಮತ್ಯಾರಿಗೂ ಆಗಿಲ್ಲ. ಅದೇಕೋ ಇತಿಹಾಸ ಮರುಕಳಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ನಮ್ಮ ಜನರನ್ನು ಒಡೆದಾಳುವ ಮೂಲಕ ಒಳ ಸಂಘರ್ಷ ಹುಟ್ಟುಹಾಕುವಲ್ಲಿ ಮೇಲ್ವರ್ಗದವರು ಯಶಸ್ವಿಯಾಗುತ್ತಿದ್ದಾರೆ. ಈ ಜಡತ್ವದಿಂದ ಹೊರಬರಬೇಕಾದರೆ ನಮ್ಮ ಒಗ್ಗಟ್ಟೆ ಇದಕ್ಕೆ ಮೂಲಮಂತ್ರವಾಗಬೇಕು. ಒಡೆದು ನೂರು ಹೋಳಾಗಿರುವ ಎಲ್ಲಾ ದಲಿತಪರ ಸಂಘಟನೆಗಳು ಒಂದಾಗಬೇಕು.
ನಮ್ಮ ದೇಶದಲ್ಲಿ ನೂರು ಕೋಟಿ ಜನರಿದ್ದಾರೆ ಆದರೂ ಏಕೆ ದಲಿತ ಭಾಷೆ, ದಲಿತ ಸಂವೇದನೆ ಅನ್ನೋದು ಮೇಲ್ಪದರಕ್ಕೆ ಬರುತ್ತಿಲ್ಲವೆನ್ನುವ ವಿಚಾರ ಪ್ರಸ್ತಾಪಿಸಿದರೆ ಇದಕ್ಕೆ ಬಹುತೇಕ ಕಾರಣ ಬಡತನ, ಅನರಕ್ಷತೆ. ಹಾಗಾಗಿ ಇಂತಹ ಎಲ್ಲಾ ಒತ್ತಡಗಳ ನಡುವೆ ಭಾರೀ ಜನಸಮುದಾಯವನ್ನು ಹೊಂದಿರುವ ಈ ದಲಿತ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಕಷ್ಟು ಪ್ರಯತ್ನಗಳು ಆಗಬೇಕಾಗಿದೆ ಮತ್ತು ಶಾಸ್ತ್ರೀಯ ಅಧ್ಯಯನಗಳೂ ಆಗಬೇಕಾಗಿದೆ.







