ಬಾಂಜಾರುಮಲೆ ಮಲೆಕುಡಿಯರ ಕಾಲನಿಗೆ ಡಿವೈಎಸ್ಪಿ ರವೀಶ್ ಭೇಟಿ

ಬೆಳ್ತಂಗಡಿ, ಸೆ.29: ತಾಲೂಕಿನ ಬಾಂಜಾರುಮಲೆಯ ಮಲೆಕುಡಿಯರ ಕಾಲನಿಗೆ ಬಂಟ್ವಾಳ ಡಿವೈಎಸ್ಪಿ ರವೀಶ್ ಗುರುವಾರ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.
ಇತ್ತೀಚೆಗೆ ನಡೆದ ಪರಿಶಿಷ್ಟ ಜಾತಿ ಪಂಗಡದ ಕುಂದುಕೊರತೆ ಸಭೆಯಲ್ಲಿ ಬಾಂಜಾರು ಮಲೆ ನಿವಾಸಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿತ್ತು. ಈ ಹಿನ್ನಲೆಯಲ್ಲಿ ಇಂದು ಅವರು ಅಲ್ಲಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಾಜರಿದ್ದ ಇಲ್ಲಿನ ಮೂಲ ನಿವಾಸಿಗಳು ತಮಗೆ ರಸ್ತೆ ವ್ಯವಸ್ಥೆ ಇಲ್ಲವಾಗಿದ್ದು ಮನೆಯಿಂದ ಹೊರಗೆ ಹೋಗುವುದೇ ಸಮಸ್ಯೆಯಾಗಿದೆ. ರಸ್ತೆ ಅಭಿವೃದ್ಧಿಪಡಿಸಬೇಕು. ಅದಕ್ಕೆ ಅಗತ್ಯವಿದ್ದರೆ ಖಾಸಗಿಯವರ ಬಳಿ ಇರುವ ಜಮೀನನ್ನು ತೆಗೆದುಕೊಂಡು ರಸ್ತೆ ಅಭಿವೃದ್ದಿಪಡಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೆ ಖಾಸಗಿ ಭೂಮಾಲಕರು ಜಮೀನು ನೀಡುವುದಾಗಿ ತಿಳಿಸಿದ್ದಾರೆ ಎಂದು ಜನರು ತಿಳಿಸಿದಾಗ ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವುದಾಗಿ ಅವರು ಭರವಸೆ ನೀಡಿದರು.
ಸರಕಾರ ನೀಡುವ ಪಡಿತರ ವಸ್ತುಗಳನ್ನು ಪಡೆಯಲು 30 ಕಿ.ಮೀ. ಸುತ್ತಿ ಬಳಸಿ ಹೋಗಬೇಕಾಗಿದೆ. ತಿಂಗಳಿಗೆ ಒಮ್ಮೆಯಾದರೂ ಸಂಚಾರಿ ಪಡಿತರ ವಾಹನ ಇಲ್ಲಿಗೆ ಬರುವಂತೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು. ಸುಮಾರು 40 ಕ್ಕೂ ಹೆಚ್ಚು ಮನೆಗಳಿರುವ ಇಲ್ಲಿಗೆ ಅಂಗನವಾಡಿ ಕೇಂದ್ರವನ್ನು ಒದಗಿಸಬೇಕು ಮುಂತಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟರು ಆನರ ಸಮಸ್ಯೆಗಳನ್ನು ಕೇಳಿದ ಡಿವೈಎಸ್ಪಿ ರವೀಶ್, ಈ ವಿಚಾರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮೂಲಕ ಜಿಲ್ಲಾಡಳಿತದ ಹಾಗೂ ಸರಕಾರದ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಖಾಸಗಿ ಎಸ್ಟೇಟ್‌ನವರು ಬಾಂಜಾರು ಮಲೆಗೆ ಹೋಗುವ ರಸ್ತೆಗೆ ಅಡ್ಡಲಾಗಿ ಹಾಕಿರುವ ಗೇಟ್ ಅನ್ನು ಪರಿಶೀಲಿಸಿ ಅಲ್ಲಿದ್ದವರಿಂದ ಮಾಹಿತಿ ಪಡೆದರು ಹಾಗೂ ಯಾವುದೇ ಕಾರಣಕ್ಕೂ ಗೇಟಿಗೆ ಬೀಗ ಅಳವಡಿಸಬಾರದು ಹಾಗೂ ಒಳಗೆ ಹೋಗುವವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗಬಾರದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಶೇಖರ ಲಾಯಿಲ ಇದ್ದರು.







