ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ
ಮುಖ್ಯಾಧಿಕಾರಿಯ ವರ್ಗಾವಣೆ ರದ್ದತಿಗೆ ಆಗ್ರಹ

ಕಾರ್ಕಳ, ಸೆ.29: ‘‘ಪುರಸಭಾ ಮುಖ್ಯಾಧಿಕಾರಿ ರಾಯಪ್ಪರ ಸೇವೆ ಪುರಸಭೆಗೆ ಅಗತ್ಯವಿದೆ. ಆದ್ದರಿಂದ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಇಲ್ಲೇ ಸೇವೆಯನ್ನು ಮುಂದುವರಿಸಿರಿ...’’
ಇದು ಗುರುವಾರ ನಡೆದ ಕಾರ್ಕಳ ಪುರಸಭಾ ಮಾಸಿಕ ಸಭೆಯಲ್ಲಿ ಕೇಳಿಬಂದ ಸದಸ್ಯರ ಒಕ್ಕೊರಳ ಆಗ್ರಹ. ಪುರಸಭಾಧ್ಯಕ್ಷೆ ಅನಿತಾ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ರಾಯಪ್ಪ ಅವರ ವರ್ಗಾವಣೆ ಕುರಿತು ಚರ್ಚೆ ನಡೆಯಿತು. ಈ ಸಂದರ್ಭ ಮಾತನಾಡಿದ ರಾಯಪ್ಪ, ಒತ್ತಡದ ಕೆಲಸದ ನಡುವೆಯೂ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ವಸತಿ ಸಮುಚ್ಚಯದಿಂದಾಗಿ ಬಾವಿ ನೀರು ಕಲುಷಿತ: ಅನಂತಶಯನದ ಬಳಿಯಿರುವ ವಸತಿ ಸಮುಚ್ಚಯದ ಒಳಚರಂಡಿಯ ಪೈಪ್‌ಗಳು ಅಲ್ಲಲ್ಲಿ ತುಂಡಾಗಿದ್ದು, ಇದರಿಂದ ಸ್ಥಳೀಯ ಮನೆಗಳ ಬಾವಿಯ ನೀರು ಕೆಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಸದಸ್ಯ ಶುಭದ ರಾವ್ ಆಗ್ರಹಿಸಿದರು.
ಉಪಾಧ್ಯಕ್ಷ ಗಿರಿಧರ್ ನಾಯಕ್ ಮಾತನಾಡಿ, ಒಳಚರಂಡಿ ಸಮಸ್ಯೆ ಯಿಂದಾಗಿ ಪುರಸಭೆ ವ್ಯಾಪ್ತಿಯ ನೂರಕ್ಕೂ ಹೆಚ್ಚು ಬಾವಿಗಳು ಕಲುಷಿತ ಗೊಂಡಿವೆ ಎಂದು ದೂರಿದರು. ಅರ್ಧದಲ್ಲೇ ಸಭೆಯಿಂದ ಹೊರನಡೆದ ಅಧಿಕಾರಿಗಳು: ಹಿಂಬದಿಯಲ್ಲಿ ಆಸೀನರಾಗಿದ್ದ ಅಧಿಕಾರಿಗಳು ಸಭೆಯ ಅರ್ಧದಲ್ಲೆ ಎದ್ದು ಹೋಗುತ್ತಿರುವುದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕಾಶ್ ರಾವ್ ಮಾತನಾಡಿ, ಸಭೆಯಲ್ಲಿ ಉತ್ತರಿಸಬೇಕಾದ ಅಧಿಕಾರಿ ವರ್ಗ ಮಧ್ಯದಲ್ಲೆ ಎದ್ದು ಹೋದರೆ ನಾವು ಯಾರಲ್ಲಿ ಪ್ರಶ್ನಿಸಲಿ ಎಂದು ಆಕ್ರೋಶಿತರಾದರು. ಇದಕ್ಕೆ ಬೆಂಬಲ ಸೂಚಿಸಿದ ಸದಸ್ಯರಾದ ಪಾರ್ಶ್ವನಾಥ ವರ್ಮ, ವಿವೇಕಾನಂದ ಶೆಣೈ, ಅಕ್ಷಯ್ ರಾವ್, ವಿನ್ನಿಬೋಲ್ಡ್ ಮೆಂಡೋನ್ಸಾ, ಶ್ರೀಧರ್ ಮತ್ತು ಯೋಗೀಶ್ ದೇವಾಡಿಗ ಅಧ್ಯಕ್ಷರ ಮುಂದೆ ತೆರಳಿ ಆಕ್ಷೇಪಿಸಿದರು. ಬಳಿಕ ಒಬ್ಬೊಬ್ಬರೆ ಅಧಿಕಾರಿಗಳು ಮತ್ತೆ ಬಂದು ಸಭೆಯಲ್ಲಿ ಆಸೀನರಾದರು. ಸುಭಿತ್ ಎನ್.ಆರ್.ಮಾತನಾಡಿ, ಈಗಾಗಲೇ ಅಧಿಕಾರ ಸ್ವೀಕರಿಸಿದ ಅಭಿಯಂತರರನ್ನು ಪುರಸಭಾ ಪ್ರತಿ ಮಾಸಿಕ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಬೇಕು ಎಂದು ಮುಖ್ಯಾಧಿಕಾರಿಗೆ ಮನವಿ ಮಾಡಿದರು. ಚುುಹಮ್ಮದ್ ಶರೀಫ್ ಮಾತನಾಡಿ, ಬಂಗ್ಲೆಗುಡ್ಡೆಯಲ್ಲಿ ಬೀದಿ ನಾಯಿಗಳ ಸಮಸ್ಯೆಯಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.





