ಕೊರಿಯಾ ಓಪನ್: ಜಯರಾಮ್ ಕ್ವಾರ್ಟರ್ ಫೈನಲ್‌ಗೆ

ಸಿಯೊಲ್, ಸೆ.29: ಕೊರಿಯಾ ಓಪನ್‌ನಲ್ಲಿ ಸ್ಪರ್ಧೆಯಲ್ಲಿರುವ ಭಾರತದ ಏಕೈಕ ಆಟಗಾರನಾಗಿರುವ ಅಜಯ್ ಜಯರಾಮ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಯರಾಮ್ ಅವರು ಚೀನಾದ ಹುಯಾಂಗ್ ಯೂಕ್ಸಿಯಾಂಗ್‌ರನ್ನು 40 ನಿಮಿಷಗಳ ಹೋರಾಟದಲ್ಲಿ 21-15, 21-18 ಗೇಮ್‌ಗಳ ಅಂತರದಿಂದ ಮಣಿಸಿದರು.
ವಿಶ್ವದ ನಂ.27ನೆ ಆಟಗಾರ ಜಯರಾಮ್ ಕಳೆದ ವರ್ಷ ಕೆನಡಾ ಓಪನ್‌ನಲ್ಲೂ ಚೀನಾದ ಆಟಗಾರನನ್ನು ಮಣಿಸಿದ್ದರು. ಶುಕ್ರವಾರ ನಡೆಯಲಿರುವ ಅಂತಿಮ ನಾಲ್ಕರ ಪಂದ್ಯದಲ್ಲಿ ಜಯರಾಮ್ ಕೊರಿಯಾದ ಲೀ ಯಿಯೂನ್‌ರನ್ನು ಎದುರಿಸಲಿದ್ದಾರೆ.
ಭಾರತದ ಇನ್ನೋರ್ವ ಸಿಂಗಲ್ಸ್ ಆಟಗಾರ ಸಾಯಿ ಪ್ರಣೀತ್ 34 ನಿಮಿಷಗಳ ಹೋರಾಟದಲ್ಲಿ ಕೊರಿಯದ ಸನ್ ವಾನ್ ಹೊ ವಿರುದ್ಧ 9-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.
ಮೊದಲ ಗೇಮ್‌ನಲ್ಲಿ ಜಯರಾಮ್-ಹ್ಯೂಯಾಂಗ್ ಒಂದು ಹಂತದಲ್ಲಿ 7-7 ರಿಂದ ಸಮಬಲದ ಹೋರಾಟ ನೀಡಿದ್ದರು. ಸತತ 5 ಅಂಕ ಗಳಿಸಿದ ಜಯರಾಮ್ ಚೀನಾದ ಆಟಗಾರನಿಗೆ ತಿರುಗೇಟು ನೀಡಿ ಮೊದಲ ಗೇಮ್‌ನ್ನು 21-15 ರಿಂದ ಗೆದ್ದುಕೊಂಡರು.
ಎರಡನೆ ಗೇಮ್‌ನಲ್ಲಿ ಜಯರಾಮ್ ಒಂದು ಹಂತದಲ್ಲಿ 13-7ರಿಂದ ಮುನ್ನಡೆಯಲ್ಲಿದ್ದರು. ಆಗ ತಿರುಗಿ ಬಿದ್ದ ಚೀನಾದ ಶಟ್ಲರ್ ಹಿನ್ನಡೆಯನ್ನು 12-14ಕ್ಕೆ ತಗ್ಗಿಸಿದರು. ಅಂತಿಮವಾಗಿ ಪ್ರತಿ ಹೋರಾಟ ನೀಡಿದ ಜಯರಾಮ್ 21-18 ರಿಂದ ಗೇಮ್‌ನ್ನು ಗೆದ್ದುಕೊಂಡರು.







