ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ಕೇಂದ್ರದಿಂದ ಬಹುಮಾನ

ಹೊಸದಿಲ್ಲಿ, ಸೆ.29: ಇತ್ತೀಚೆಗೆ ಕೊನೆಗೊಂಡ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಪ್ಯಾರಾಥ್ಲೀಟ್‌ಗಳಿಗೆ ಕೇಂದ್ರ ಸರಕಾರ 90 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ.
ಸರಕಾರದ ಅರಿವು ಮೂಡಿಸುವ ಹಾಗೂ ಪ್ರಚಾರ ಯೋಜನೆಯ(ಎಜಿಪಿ) ಅಡಿಯಲ್ಲಿ ನಗದು ಬಹುಮಾನವನ್ನು ನೀಡಲಾಗುತ್ತಿದ್ದು, ವಿಶೇಷ ಕಾರ್ಯಕ್ರಮದಲ್ಲಿ ಪದಕ ವಿಜೇತರನ್ನು ಸನ್ಮಾನಿಸಲಾಗುತ್ತದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೊಟ್ ತಿಳಿಸಿದ್ದಾರೆ.
ರಿಯೋಪ್ಯಾರಾಲಿಂಪಿಕ್ಸ್ 2016ರಲ್ಲಿ ಚಿನ್ನದ ಪದಕ ವಿಜೇತರಾದ ಮಾರಿಯಪ್ಪನ್ ತಂಗವೇಲು ಹಾಗೂ ದೇವೇಂದ್ರ ಜಜಾರಿಯಾಗೆ ತಲಾ 30 ಲಕ್ಷ ರೂ. ನಗದು, ಬೆಳ್ಳಿ ಪದಕ ವಿಜೇತ ದೀಪಾ ಮಲಿಕ್‌ಗೆ 20 ಲಕ್ಷ ರೂ. ಹಾಗೂ ವರುಣ್ ಸಿಂಗ್ ಭಾಟಿಗೆ 10 ಲಕ್ಷ ರೂ. ನಗದು ನೀಡಿ ಸನ್ಮಾನಿಸಲಾಗುತ್ತದೆ.
ರಿಯೋ ಪ್ಯಾರಾಲಿಂಪಿಕ್ಸ್ 2016ರಲ್ಲಿ ನಾಲ್ಕು ಪದಕಗಳನ್ನು ಜಯಿಸಿದ್ದ ಭಾರತದ ಪ್ಯಾರಾಥ್ಲೀಟ್‌ಗಳು ಪರಿಣಾಮಕಾರಿ ಪ್ರದರ್ಶನ ನೀಡಿ ಇತಿಹಾಸ ನಿರ್ಮಿಸಿದ್ದಾರೆ. ನಮ್ಮ ಇಲಾಖೆಯು ಪದಕ ವಿಜೇತರಿಗೆ ಒಟ್ಟು 90 ಲಕ್ಷ ರೂ. ಬಹುಮಾನ ವಿತರಿಸಲು ನಿರ್ಧರಿಸಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಭಾರತದ ಈ ವರ್ಷ ಪ್ಯಾರಾಲಿಂಪಿಕ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಈ ಬಾರಿ 19 ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾರತ ನಾಲ್ಕು ಪದಕ ಜಯಿಸಿತ್ತು.







