ಸ್ವದೇಶದಲ್ಲಿ ಇಂದು 250ನೆ ಟೆಸ್ಟ್ ಆಡಲಿರುವ ಭಾರತಕ್ಕೆ ಸರಣಿಯತ್ತ ಚಿತ್ತ
ವಿರಾಟ್ ಕೊಹ್ಲಿ ಪಡೆಗೆ ನಂ.1 ಸ್ಥಾನಕ್ಕೇರುವ ಅವಕಾಶ

ಕೋಲ್ಕತಾ, ಸೆ.29: ಕಾನ್ಪುರದಲ್ಲಿ ನಡೆದ ಐತಿಹಾಸಿಕ 500ನೆ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದ್ದ ಭಾರತ ತಂಡ ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಶುಕ್ರವಾರದಿಂದ ನ್ಯೂಝಿಲೆಂಡ್ ವಿರುದ್ಧ ಎರಡನೆ ಟೆಸ್ಟ್ ಪಂದ್ಯ ಆಡಲಿದೆ.
ಭಾರತ ಸ್ವದೇಶಿ ನೆಲದಲ್ಲಿ ಆಡುತ್ತಿರುವ 250ನೆ ಟೆಸ್ಟ್ ಪಂದ್ಯ ಇದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ ವಿಶ್ವದ ನಂ.1 ಟೆಸ್ಟ್ ತಂಡವಾಗಿ ಹೊರಹೊಮ್ಮಲಿದೆ. ಈ ಪಂದ್ಯವನ್ನು ಜಯಿಸುವುದರೊಂದಿಗೆ ವಿರಾಟ್ ಕೊಹ್ಲಿ ಪಡೆ ಸ್ವದೇಶದಲ್ಲಿ ನ್ಯೂಝಿಲೆಂಡ್‌ನ ವಿರುದ್ಧ 10ನೆ ಟೆಸ್ಟ್ ಸರಣಿಯನ್ನು ಗೆಲ್ಲುವ ತವಕದಲ್ಲಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಭಾರತದ ಸ್ಪಿನ್ನರ್‌ಗಳನ್ನು ಎದುರಿಸಲು ಸಾಧ್ಯವಾಗಿರಲಿಲ್ಲ. ಸ್ವಿನ್‌ದ್ವಯರಾದ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜ ನ್ಯೂಝಿಲೆಂಡ್‌ನ 20 ವಿಕೆಟ್‌ಗಳ ಪೈಕಿ 16 ವಿಕೆಟ್ ಕಬಳಿಸಿ ಭಾರತಕ್ಕೆ 197 ರನ್‌ಗಳ ಅಂತರದ ಗೆಲುವು ತಂದುಕೊಟ್ಟಿದ್ದರು. ಭಾರತ ಮತ್ತೊಮ್ಮೆ ಉಪಖಂಡದಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿತ್ತು.
ಐಕಾನ್ ಕ್ರಿಕೆಟ್ ಗ್ರೌಂಡ್ ಈಡನ್‌ಗಾರ್ಡನ್ಸ್‌ನಲ್ಲಿ ಭಾರತ 11-9 ಗೆಲುವು-ಸೋಲಿನ ದಾಖಲೆ ಹೊಂದಿದೆ. 2012ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಸೋತಿತ್ತು. ಮತ್ತೊಂದೆಡೆ, ನ್ಯೂಝಿಲೆಂಡ್ ತಂಡ ಭಾರತದಲ್ಲಿ 28 ವರ್ಷಗಳ ಹಿಂದೆ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ.
1965ರಲ್ಲಿ ಕೊನೆಯ ಬಾರಿ ಈಡನ್‌ಗಾರ್ಡನ್ಸ್‌ನಲ್ಲಿ ಆಡಿದೆ. ಕೋಲ್ಕತಾದ ಪಿಚ್ ಕಾನ್ಪುರ ಪಿಚ್‌ಗಿಂತ ಭಿನ್ನವಾಗಿದೆ. ಇತ್ತೀಚೆಗೆ ಮೈದಾನದಲ್ಲಿ ಕಾಮಗಾರಿ ನಡೆದಿರುವ ಕಾರಣ ಪಿಚ್ ಸ್ಪಿನ್ ಸ್ನೇಹಿಯಾಗಿಲ್ಲ ಎನ್ನಲಾಗಿದೆ. ಈ ವಿಷಯ ನ್ಯೂಝಿಲೆಂಡ್‌ಗೆ ನೆಮ್ಮದಿ ತಂದಿದೆ.
ಟೀಮ್ ನ್ಯೂಸ್: ಭಾರತ: ಎರಡು ವರ್ಷಗಳ ಅಂತರದ ಬಳಿಕ ಗೌತಮ್ ಗಂಭೀರ್ ಟೆಸ್ಟ್ ತಂಡಕ್ಕೆ ವಾಪಸಾಗಿರುವುದು ಸಿಹಿ ಸುದ್ದಿ. ಗಾಯಗೊಂಡಿರುವ ಕೆ.ಎಲ್. ರಾಹುಲ್ ಬದಲಿಗೆ ಶಿಖರ್ ಧವನ್ ಆಡುವ ಸಾಧ್ಯತೆಯಿರುವ ಕಾರಣ ಗಂಭೀರ್‌ಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಗಂಭೀರ್‌ರನ್ನು ಕೇವಲ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ರಾಹುಲ್ ಚೇತರಿಸಿಕೊಂಡ ಬಳಿಕ ದಿಲ್ಲಿಯ ಎಡಗೈ ದಾಂಡಿಗ 15 ಸದಸ್ಯರ ತಂಡದಲ್ಲಿರುವುದು ಡೌಟ್.
ನ್ಯೂಝಿಲೆಂಡ್: ಹಿರಿಯ ಸ್ಪಿನ್ನರ್ ಜೀತನ್ ಪಟೇಲ್ ಗಾಯಗೊಂಡಿರುವ ಮಾರ್ಕ್ ಕ್ರೆಗ್ ಬದಲಿಗೆ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಾನ್ಪುರ ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳ ಪ್ರದರ್ಶನ ನೀರಸವಾಗಿದ್ದ ಕಾರಣ ನಾಯಕ ಕೇನ್ ವಿಲಿಯಮ್ಸನ್ ಸ್ಪಿನ್ನರ್‌ಗಳ ಒತ್ತು ನೀಡುವ ಸಾಧ್ಯತೆಯಿಲ್ಲ. ವಿಲಿಯಮ್ಸನ್ ಅನಾರೋಗ್ಯಕ್ಕೆ ಒಳಗಾದ ಕಾರಣ ಗುರುವಾರ ಪತ್ರಿಕಾಗೋಷ್ಠಿಗೆ ಬರಲಿಲ್ಲ. ಕಿವೀಸ್ ಅಗ್ರ ಕ್ರಮಾಂಕದಲ್ಲಿ ಮಾರ್ಟಿನ್ ಗಪ್ಟಿಲ್‌ರನ್ನು ನೆಚ್ಚಿಕೊಂಡಿದೆ.
ಪಿಚ್ ಹಾಗೂ ವಾತಾವರಣ: ದ್ವಿತೀಯ ಟೆಸ್ಟ್‌ಗೆ ಸಿದ್ಧಪಡಿಸಲಾಗಿರುವ ಈಡನ್ ಪಿಚ್ ಒದ್ದೆಯಾಗಿದ್ದು, ಸ್ಪಿನ್ನರ್‌ಗಳ ಬೇಗನೆ ನೆರವು ನೀಡಲಾರದು. ಆದರೆ, ಇತಿಹಾಸದತ್ತ ಗಮನಹರಿಸಿದರೆ, ಪಿಚ್ ಬಗ್ಗೆ ಊಹಿಸುವುದು ಕಷ್ಟ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗುಲಿ ಹೇಳಿದ್ದಾರೆ.
ಪದೇ ಪದೇ ಮಳೆ ಸುರಿಯುತ್ತಿದ್ದ ಕಾರಣ ಈಡನ್‌ಗಾರ್ಡನ್ಸ್‌ನ ಪಿಚ್‌ಗೆ ಹೊದಿಕೆ ಹಾಸಲಾಗಿದೆ. ಈ ಹಿನ್ನೆಲೆಯಲ್ಲಿ ಪಿಚ್ ತೇವಾಂಶದಿಂದ ಕೂಡಿದೆ. ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಕೋಲ್ಕತಾದಲ್ಲಿ ಇದೇ ಮೊದಲ ಬಾರಿ ಸೆಪ್ಟಂಬರ್‌ನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಹವಾಮಾನ ಇಲಾಖೆ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹೇಳಿರುವ ಕಾರಣ ಪಂದ್ಯಕ್ಕೆ ಮಳೆ ಅಡಚಣೆಯಾಗಬಹುದು. ಮಂದಬೆಳಕಿನ ಸಮಸ್ಯೆ ಎದುರಾದರೆ ಫ್ಲಡ್‌ಲೈಟ್ ಬಳಸಬಹುದು.
ಸಂಭಾವ್ಯ ತಂಡಗಳು:
ಭಾರತ: ಶಿಖರ್ ಧವನ್/ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮ/ಅಮಿತ್ ಮಿಶ್ರಾ, ವೃದ್ದಿಮಾನ್ ಸಹಾ(ವಿಕೆಟ್‌ಕೀಪರ್), ರವೀಂದ್ರ ಜಡೇಜ, ಆರ್.ಅಶ್ವಿನ್, ಉಮೇಶ್ ಯಾದವ್, ಮುಹಮ್ಮದ್ ಶಮಿ.
ನ್ಯೂಝಿಲೆಂಡ್: ಟಾಮ್ ಲಥಾಮ್, ಮಾರ್ಟಿನ್ ಗಪ್ಟಿಲ್/ಹೆನ್ರಿ ನಿಕೊಲ್ಸ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಲೂಕ್ ರೊಂಚಿ, ಮಿಚೆಲ್ ಸ್ಯಾಂಟ್ನರ್, ಬಿಜೆ ವಾಟ್ಲಿಂಗ್(ವಿ.ಕೀ.), ಜೀತನ್ ಪಟೇಲ್, ಐಶ್ ಸೋಧಿ, ಟ್ರೆಂಟ್ ಬೌಲ್ಟ್, ನೀಲ್ ವಾಗ್ನರ್.
ಪಂದ್ಯ ಆರಂಭದ ಸಮಯ: 9:30







