ಪಾಕ್‌ನ್ನು ಮಣಿಸಿದ ಭಾರತ ಫೈನಲ್‌ಗೆ
ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿ

ಹೊಸದಿಲ್ಲಿ, ಸೆ.29: ಹದಿನೆಂಟು ವರ್ಷದೊಳಗಿನವರ ಏಷ್ಯಾ ಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಅಂತರದಿಂದ ಮಣಿಸಿದ ಭಾರತದ ಪುರುಷರ ಹಾಕಿ ತಂಡ ಫೈನಲ್‌ಗೆ ತಲುಪಿದೆ.
ಭಾರತ ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
ಗುರುವಾರ ಇಲ್ಲಿ ನಡೆದ ಸೆಮಿ ಫೈನಲ್‌ನಲ್ಲಿ ಉತ್ತಮ ಆರಂಭವನ್ನು ಪಡೆದ ಭಾರತ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿದ ಭಾರತ ತಂಡ 3ನೆ ಗೋಲು ಬಾರಿಸಿತ್ತು. ಕೊನೆಯ 10 ನಿಮಿಷಗಳ ಆಟದಲ್ಲಿ ತಿರುಗೇಟು ನೀಡಿದ ಪಾಕ್ ಒಂದು ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ಇಳಿಸಿತು.
ಭಾರತದ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದಿಂದ ಕಠಿಣ ಸವಾಲು ಎದುರಿಸಿತ್ತು. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಆ ಪಂದ್ಯದಲ್ಲಿ 4-5 ಅಂತರದಿಂದ ಸೋತಿತ್ತು. ಒಮನ್ ವಿರುದ್ಧದ ಪಂದ್ಯವನ್ನು 11-0 ಗೋಲುಗಳ ಅಂತರದಿಂದ ಗೆದ್ದುಕೊಂಡ ಭಾರತ ಟೂರ್ನಿಯಲ್ಲಿ ಅಂಕದ ಖಾತೆ ತೆರೆಯಿತು.
Next Story





