ಸೇನೆಯನ್ನು ಮುಂದಿಟ್ಟು ರಾಜಕೀಯ ಬೇಡ
ಹಲವು ತಿಂಗಳ ಹಿಂದೆ ಮ್ಯಾನ್ಮಾರ್‌ಗೆ ಭಾರತೀಯ ಸೇನೆ ನುಗ್ಗಿ ಅಲ್ಲಿ ಅಡಗಿರುವ ಉಗ್ರರನ್ನು ಸದೆಬಡಿಯಿತು ಎನ್ನುವ ಸುದ್ದಿ ತೀವ್ರ ಚರ್ಚೆಗೆ ಒಳಗಾಯಿತು. ಇಂತಹ ದಾಳಿಗಳು ಉಭಯ ದೇಶಗಳ ನಡುವೆಯೂ ಆಗಾಗ ಭದ್ರತೆಯ ಕಾರಣಕ್ಕಾಗಿ ನಡೆಯುತ್ತವೆ ಮತ್ತು ಇದನ್ನು ಸೇನೆ ಗುಪ್ತವಾಗಿ ಕಾಪಾಡಿಕೊಳ್ಳುತ್ತದೆ. ಈ ದಾಳಿ ಅನೇಕ ಸಂದರ್ಭಗಳಲ್ಲಿ ಉಭಯ ದೇಶಗಳ ಸಂಬಂಧವೇ ಬಿಗಡಾಯಿಸಬಹುದು. ಇಂತಹ ದಾಳಿಗಳು ಯಾವುದೇ ಸರಕಾರವಿರಲಿ ಆಗಾಗ ನಡೆಯುತ್ತಲೇ ಇರುತ್ತವೆ. ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸೇನೆಗೆ ಇಂತಹ ದಾಳಿ ಕೆಲವೊಮ್ಮೆ ಅತ್ಯಗತ್ಯವಾಗಿರುತ್ತದೆ. ಆದರೆ ಮ್ಯಾನ್ಮಾರ್ ದಾಳಿ ಮಾತ್ರ ವಿಚಿತ್ರ ತಿರುವು ಪಡೆಯಿತು. ಕೇಂದ್ರದ ಸಚಿವರೋರ್ವರು ಬಹಿರಂಗವಾಗಿ ಮಾಧ್ಯಮಗಳ ಜೊತೆಗೆ ‘‘ಭಾರತ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ದಾಳಿ ನಡೆಸಿ ಉಗ್ರರನ್ನು ಸದೆಬಡಿಯಿತು’’ ಎಂದು ಹೆಮ್ಮೆಯಿಂದ ಕೊಚ್ಚಿಕೊಂಡರು. ಮಾಧ್ಯಮಗಳು ಇದನ್ನು ಸುದ್ದಿ ಮಾಡಿದವು. ಅತ್ಯಂತ ವಿಪರ್ಯಾಸವೆಂದರೆ, ಗಡಿಯೊಳಗೆ ನುಗ್ಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದವರು ಸೈನಿಕರಾಗಿದ್ದರೂ ಅದನ್ನು ಬಿಜೆಪಿಯ ಮುಖ್ಯವಾಗಿ ನರೇಂದ್ರ ಮೋದಿಯವರ ಸಾಧನೆಯಾಗಿ ಬಿಂಬಿಸಲು ಬಿಜೆಪಿ ಯತ್ನಿಸಿತು. ನೆರೆರಾಷ್ಟ್ರವಾದ ಮ್ಯಾನ್ಮಾರ್ ಇದರಿಂದ ತೀವ್ರ ಮುಜುಗರಕ್ಕೊಳಗಾಯಿತು. ಎರಡು ದೇಶಗಳು ಪರಸ್ಪರ ಯುದ್ಧ ಘೋಷಿಸಿಕೊಳ್ಳಬೇಕಾದಂತಹ ಸನ್ನಿವೇಶವನ್ನು ಕೇಂದ್ರದ ಹರಕಲು ಬಾಯಿಯ ಬಿಜೆಪಿ ನಾಯಕರು ಸೃಷ್ಟಿಸಿದ್ದರು. ಸೇನೆಗೂ ಇದರಿಂದ ತೀವ್ರ ಮುಜುಗರವಾಗಿತ್ತು. ‘‘ಅಂತಹುದು ಯಾವುದೂ ಸಂಭವಿಸಿಲ್ಲ’’ ಎಂದು ಹೇಳಿತಾದರೂ ಉಭಯ ದೇಶಗಳ ಸಂಬಂಧಗಳ ಮೇಲೆ ಅದಾಗಲೇ ಪರಿಣಾಮ ಬೀರಿಯಾಗಿತ್ತು. ಇದೀಗ ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವುದು ಇದಕ್ಕಿಂತ ಭಿನ್ನವಾದ ಪ್ರಕರಣವೇನೂ ಅಲ್ಲ. ಉರಿಯಲ್ಲಿ ನಡೆದಿರುವ ಭಾರೀ ದಾಳಿಯ ಹಿಂದೆ ಪಾಕಿಸ್ತಾನ ಇರಲಿ, ಇಲ್ಲದಿರಲಿ ಅದರಿಂದ ಭಾರತಕ್ಕೆ ತೀವ್ರ ನಷ್ಟವುಂಟಾಗಿದೆ ಎನ್ನುವುದು ಸುಳ್ಳಲ್ಲ. ನಮ್ಮ ಶ್ರೇಷ್ಠ ಸೈನಿಕರನ್ನು ನಾವು ಈ ದಾಳಿಯಲ್ಲಿ ಕಳೆದುಕೊಂಡೆವು. ಇದೇ ಸಂದರ್ಭದಲ್ಲಿ ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ರಾಜಕೀಯ ಆಟ ಆಡುತ್ತಿದ್ದ ಕೇಂದ್ರದ ಬಿಜೆಪಿ ನಾಯಕರಿಗೂ ಇದರಿಂದ ಭಾರೀ ಮುಖಭಂಗವಾಗಿತ್ತು. ಅಧಿಕಾರಕ್ಕೆ ಬರುವ ಮೊದಲು ‘ಪಾಕಿಸ್ತಾನದೊಂದಿಗೆ ಯುದ್ಧಕ್ಕಾಗಿ’ ತುದಿಗಾಲಲ್ಲಿ ನಿಂತಿದ್ದ ಮೋದಿ ಪರಿವಾರದ ಮುಂದೆ ಅವರದೇ ಭಕ್ತರು ಪ್ರಶ್ನೆಗಳನ್ನು ಇಡತೊಡಗಿದರು. ಜನರನ್ನು ಭಾವನಾತ್ಮಕವಾಗಿ ಮರುಳು ಮಾಡುತ್ತಲೇ ಅಧಿಕಾರಕ್ಕೇರಿರುವ ನಾಯಕರು ಉತ್ತರಕ್ಕಾಗಿ ತಡಬಡಿಸತೊಡಗಿದರು. ಇದೇ ಸಂದರ್ಭದಲ್ಲಿ ಉರಿ ದಾಳಿಯಲ್ಲಿ ಸೇನೆಯಿಂದ ನಡೆದಿರುವ ಕೆಲವು ವೈಫಲ್ಯಗಳೂ ಚರ್ಚೆಗೊಳಗಾದವು. ಉಗ್ರರ ಈ ಅಮಾನವೀಯ ದಾಳಿಯಿಂದ ಭಾರತೀಯ ಸೇನೆಯ ವರ್ಚಸ್ಸಿಗೂ ಸಣ್ಣಮಟ್ಟದ ಧಕ್ಕೆಯುಂಟಾಗಿತ್ತು. ಪಾಕಿಸ್ತಾನವಂತೂ ಭಾರತದ ಈ ಎಲ್ಲ ಸಂಕಟ- ನೋವುಗಳನ್ನು ಮನದಲ್ಲೇ ಸವಿಯುತ್ತಿತ್ತು. ಯಾಕೆಂದರೆ ದಾಳಿ ಮಾಡಿರುವುದು ಉಗ್ರರು. ಪಾಕಿಸ್ತಾನದ ಪ್ರಕಾರ ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳ ಪ್ರತಿಕ್ರಿಯೆ ಇದು. ಆದರೆ ಭಾರತದ ಪಾಲಿಗೆ ಪಾಕಿಸ್ತಾನವೇ ಪ್ರಾಯೋಜಿಸಿದ ದಾಳಿ ಇದು. ತನಗೆ ಸಿಕ್ಕಿದ್ದ ಮಾಹಿತಿಯ ಆಧಾರದಿಂದ ಸೇನೆಯು ಮಿಂಚಿನೋಪಾದಿಯಲ್ಲಿ ನಿಯಂತ್ರಣ ರೇಖೆಯಿಂದಾಚೆಗೆ ನುಗ್ಗಿ, ಅಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿ ವಾಪಾಸಾಯಿತು. ಸಾಧಾರಣವಾಗಿ ಗುಟ್ಟಾಗಿರಬೇಕಾಗಿದ್ದ ಈ ಸಂಗತಿ ಸೇನೆಗೂ, ಬಿಜೆಪಿಗೂ ಮಾಧ್ಯಮಗಳಲ್ಲಿ ಢಣಾಡಂಗುರವಾಗುವುದು ಅತ್ಯಗತ್ಯವಾಗಿತ್ತು. ಸೇನೆಯ ಮೇಲೆ ಮಾಡಿದ ದಾಳಿಗೆ ಸೇಡು ತೀರಿಸಿಕೊಂಡೆವು ಎನ್ನುವ ತೃಪ್ತಿ ನಮ್ಮ ಸೇನಾಪಡೆಗಾದರೆ, ಇತ್ತ ಮೋದಿ ಮತ್ತು ಅವರ ಭಕ್ತರ ಸಂಭ್ರಮವೇ ಬೇರೆ ತರಹದ್ದು. ಕಳೆದು ಹೋಗಿದ್ದ ಮೋದಿಯ 56 ಇಂಚು ಎದೆಯ ಅಗಲ ಈ ಘಟನೆಯಿಂದ ಅವರಿಗೆ ಮತ್ತೆ ದೊರಕಿಬಿಟ್ಟಿತು. ಇಡೀ ದಾಳಿಯನ್ನು ಸಂಯೋಜಿಸಿರುವುದೇ ನರೇಂದ್ರ ಮೋದಿ ಎಂಬಂತೆ ಮೋದಿಯ ಭಕ್ತರು ಎಗರಾಡುತ್ತಿದ್ದಾರೆ. ಕೆಲ ಮಾಧ್ಯಮಗಳು ಮತ್ತು ಮೋದಿ ಭಕ್ತರ ಪ್ರಕಾರ ನರೇಂದ್ರ ಮೋದಿಯೇ ಮಿಲಿಟರಿ ಸಮವಸ್ತ್ರ ಧರಿಸಿ ಸೇನೆಯೊಂದಿಗೆ ನಿಯಂತ್ರಣರೇಖೆಯಾಚೆಗೆ ನುಗ್ಗಿ ಉಗ್ರರನ್ನು ಸದೆಬಡಿದು ಬಂದಿದ್ದಾರೆ! ಈ ದಾಳಿ ನಡೆದಿದೆಯೋ ನಡೆದಿಲ್ಲವೋ ಎನ್ನುವುದಕ್ಕಿಂತಲೂ ಈ ದಾಳಿಯನ್ನು ಈ ಪರಿಯಲ್ಲಿ ವೈಭವೀಕರಿಸುವ ಅಗತ್ಯ ಭಾರತಕ್ಕೆ ಇದೆಯೇ ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಈ ವೈಭವೀಕರಣದಿಂದ ಭಾರತ ಯಾವ ರೀತಿಯಲ್ಲಿ ಲಾಭವನ್ನು ತನ್ನದಾಗಿಸಿಕೊಳ್ಳುತ್ತದೆ? ಇದೇ ಸಂದರ್ಭದಲ್ಲಿ,ಪಾಕಿಸ್ತಾನ, ತಾನು 8 ಭಾರತೀಯ ಯೋಧರನ್ನು ಕೊಂದಿದ್ದು, ಓರ್ವನನ್ನು ಸೆರೆಹಿಡಿದಿರುವುದಾಗಿ ಹೇಳುತ್ತಿದೆ. ಹಾಗೂ ಮೃತ ದೇಹಗಳನ್ನು ಪಡೆದುಕೊಳ್ಳಲು ಭಾರತ ಹಿಂದೇಟು ಹಾಕುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ ಉಭಯ ಸರಕಾರಗಳು ಮಾಧ್ಯಮಗಳನ್ನೇ ಯುದ್ಧ ಟ್ಯಾಂಕರ್‌ಗಳಾಗಿ ಬಳಸಿ, ಗಾಳಿಯಲ್ಲಿ ಗುಂಡು ಹಾರಿಸುತ್ತಿವೆ. ಜನರು ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ತಿಳಿಯದೇ ಗೊಂದಲದಲ್ಲಿದ್ದಾರೆ. ಒಟ್ಟಿನಲ್ಲಿ ಒಂದಂತೂ ಸತ್ಯ. ಎರಡು ಸರಕಾರಗಳ ನಡುವಿನ ರಾಜಕೀಯಗಳಿಗೆ ಸೈನಿಕರು ಬಲಿಪಶುಗಳಾಗುತ್ತಿದ್ದಾರೆ. ಇವುಗಳ ನಡುವೆ, ಭಾರತದಲ್ಲಂತೂ, ಮೋದಿಯ ಭಕ್ತರು ಉನ್ಮತ್ತರಂತೆ ಸಾವುಗಳನ್ನು ಸಂಭ್ರಮಿಸುತ್ತಿದ್ದಾರೆ.
ಉರಿಯಲ್ಲಿ ನಡೆದ ಉಗ್ರರ ದಾಳಿಯನ್ನು ಪಾಕಿಸ್ತಾನ ಆಯೋಜಿಸಿತ್ತು ಎನ್ನುವುದನ್ನು ಪೂರ್ಣಪ್ರಮಾಣದಲ್ಲಿ ಸಾಬೀತು ಮಾಡಲು ಭಾರತಕ್ಕೆ ಸಾಧ್ಯವಾಗಿಲ್ಲ. ಹಾಗೆಂದು ಆ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವನ್ನು ಅಲ್ಲಗಳೆಯುವಂತೆಯೂ ಇಲ್ಲ. ಹೀಗಿದ್ದೂ ಅದಕ್ಕಾಗಿ ನೇರ, ಗಡಿ ಉಲ್ಲಂಘನೆಯಂತಹ ಅಪಾಯಕಾರಿ ಕಾರ್ಯಕ್ಕೆ ಕೈ ಹಾಕಿದರೆ ಅದು ಅಂತಿಮವಾಗಿ ಯುದ್ಧದಂತಹ ಅನಪೇಕ್ಷಿತವಾದ ಸನ್ನಿವೇಶವನ್ನು ಸೃಷ್ಟಿಸುವುದರಲ್ಲಿ ಯಾವ ಅನುಮಾನವೂ ಇಲ್ಲ. ಗಡಿಯಲ್ಲಿ ನಡೆದಿರುವ ಕಾರ್ಯಾಚರಣೆಯ ಬಗ್ಗೆ ಮೋದಿ ಮತ್ತು ಅವರ ಬಳಗದ ವೈಭವೀಕರಣ ಅವರ ಹತಾಶೆಯನ್ನಷ್ಟೇ ತೋರಿಸುತ್ತದೆ. ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಸರಕಾರ ತನ್ನ ಲೋಪಗಳನ್ನು ಮುಚ್ಚಿ ಹಾಕಲು, ಸೈನಿಕರ ಸಾಹಸವನ್ನು ತನ್ನ ಸಾಹಸವೆಂಬಂತೆ ದುರುಪಯೋಗಪಡಿಸುತ್ತಿದೆ. ಸೇನೆಯಂತಹ ಸೂಕ್ಷ್ಮ ಜಾಗದಲ್ಲಿ ರಾಜಕೀಯವನ್ನು ತುರುಕಿಸಿ, ಅಧ್ವಾನವನ್ನು ಸೃಷ್ಟಿಸುತ್ತಿದೆ. ಇಂದಿರಾಗಾಂಧಿ ತನ್ನ ಆಡಳಿತ ಕಾಲದಲ್ಲಿ ಪ್ರದರ್ಶಿಸಿದ್ದ ಮುತ್ಸದ್ದಿತನದ ಒಂದು ಎಳೆಯೂ ಮೋದಿ ಸರಕಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮುಂದೊಂದು ದಿನ ಈ ಮೋದಿ ಬಳಗ ದೇಶದ ಆಡಳಿತವನ್ನು ಸಂಪೂರ್ಣ ಗಬ್ಬೆಬ್ಬಿಸಿ, ಯುದ್ಧಘೋಷಣೆಯೊಂದಿಗೆ ಎಲ್ಲಕ್ಕೂ ತೆರೆ ಎಳೆಯಲು ಮುಂದಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ.





