ಇದು ವಿಕಲಚೇತನ ವಿದ್ಯಾರ್ಥಿಗಳಿಗೆ ಮಾಡಿದ ಮೋಸವಲ್ಲವೇ..?
ಮಾನ್ಯರೆ,
ಬೆಂಗಳೂರು ವಿವಿ ಮತ್ತೆ ವಿವಾದದಲ್ಲಿದೆ. ವಿವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕವು ಎಸ್ಸಿ, ಎಸ್ಟಿ ವಿಕಲಚೇತನ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಮೊನ್ನೆ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿ ಫೋಟೊ ಕೂಡಾ ತೆಗೆದುಕೊಳ್ಳಲಾಗಿತ್ತು. ಆದರೆ ಕಾರ್ಯಕ್ರಮ ಮುಗಿದ ಕೂಡಲೇ ಲ್ಯಾಪ್‌ಟಾಪ್‌ಗಳು ಕಡಿಮೆ ಇವೆ. ಹೀಗಾಗಿ ವಾಪಸ್ ನೀಡಿ ಎಂದು ವಿದ್ಯಾರ್ಥಿಗಳಿಗೆ ಕೊಟ್ಟ ಲ್ಯಾಪ್‌ಟಾಪನ್ನು ವಾಪಸ್ ಪಡೆಯಲಾಗಿದೆ ಎಂದು ವಿಕಲಚೇತನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಬಗ್ಗೆ ವಿವಿ ಕುಲಪತಿ ಬಳಿ ಪ್ರಶ್ನಿಸಿದಾಗ ಒಟ್ಟು 124 ಲ್ಯಾಪ್‌ಟಾಪ್‌ಗಳನ್ನು ಖರೀದಿಸಲಾಗಿದೆ, ಕೆಲವರಿಗೆ ಸಿಗದಿರುವುದು ತನ್ನ ಗಮನಕ್ಕೆ ಬಂದಿದೆ ಅಂದಿದ್ದಾರೆ. ಆದರೆ ಈ ರೀತಿ ಹೇಗಾಯಿತು ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ. ಬೆಂಗಳೂರು ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಕಷ್ಟಪಟ್ಟು ಕಾರ್ಯಕ್ರಮಕ್ಕೆ ಬಂದ ವಿಕಲಚೇತನ ಸಂಶೋಧನಾ ವಿದ್ಯಾರ್ಥಿಗಳಿಗೆ ಹಗಲಲ್ಲೇ ಮೋಸ ಮಾಡಲಾಗಿದೆ. ಇದ್ಯಾವ ನ್ಯಾಯ..? ದಾಖಲೆಗಳಲ್ಲಿ ಲ್ಯಾಪ್‌ಟಾಪ್ ವಿತರಿಸಿದ್ದೇವೆ ಎಂದು ನಮೂದಿಸಲು ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತೇ ಎಂಬ ಅನುಮಾನ ಮೂಡಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ತನಿಖೆ ನಡೆಸಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದೆ. - ಶಂಶೀರ್ ಬುಡೋಳಿ, ಬೆಂಗಳೂರು





