ಹಕ್ಕುಪತ್ರಕ್ಕೆ ಆಗ್ರಹಿಸಿ ನಾಗರಿಕರಿಂದ ಅನಿರ್ದಿಷ್ಟಾವಧಿ ಧರಣಿ
ಸುಳ್ಯ, ಸೆ.29: ಪಂಜ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ನಿವೇಶನ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ ಸುಮಾರು 45 ಕುಟುಂಬಗಳಿಗೆ ಹಕ್ಕು ಪತ್ರ ನೀಡದೆ ಇಲಾಖಾ ಮಟ್ಟದಲ್ಲಿ ಕೆಲಸ ವಿಳಂಬವಾಗಿದೆ ಎಂದು ಆರೋಪಿಸಿ ಪಂಜ ನಾಡ ಕಚೇರಿ ಎದುರು ಅನಿರ್ದಿಷ್ಠಾವಧಿ ಧರಣಿ ಆರಂಭಗೊಂಡಿದೆ. ಪಂಜ ಗ್ರಾಪಂ ಆಡಳಿತ ಮಂಡಳಿ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಫಲಾನುಭವಿಗಳು ಧರಣಿ ಆರಂಭಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯಲ್ಲಿ ಪಲ್ಲೋಡಿ, ಪಡ್ಪಿನಂಗಡಿ, ನಾಗತೀರ್ಥ ಪ್ರದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸೇರಿರುವವರು ಸ್ಥಳಗಳ ಹಕ್ಕುಪತ್ರ ನೀಡಲು ದಶಕಗಳಿಂದಲೂ ಬೇಡಿಕೆ ಇಟ್ಟಿದ್ದು, 94ಸಿ ಯಲ್ಲೂ ಅರ್ಜಿಸಲ್ಲಿಸಲಾಗಿದೆ. ಈವರೆಗೂ ಹಕ್ಕು ಪತ್ರ ದೊರೆತಿಲ್ಲ. ಹಲವು ಬಾರಿ ಕಂದಾಯ ಇಲಾಖೆ ಅಧಿಕಾರಿಗಳಲ್ಲಿ ವಿನಂತಿಸಿದರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದಾಗಿ ಪ್ರತಿಭಟನಾಕಾರರು ಆರೋಪಿಸಿದರು.
ಜಿಪಂ ಸದಸ್ಯ ಎಸ್.ಎನ್. ಮನ್ಮಥ, ತಾಪಂ ಸದಸ್ಯ ಅಬ್ದುಲ್ ಗಫೂರ್, ಗ್ರಾಪಂ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್, ಕಂದಾಯ ನಿರೀಕ್ಷಕ ದಯಾನಂದ, ಡಿ.ಟಿ. ರಾಜೇಶ್, ವಿ.ಎ. ಬಸಮ್ಮ, ಗ್ರಾಪಂ ಸದಸ್ಯರು, ಫಲಾನುಭವಿಗಳು ಉಪಸ್ಥಿತರಿದ್ದರು.





