ಕೊಹ್ಲಿ, ಕೆ. ಎಲ್. ರಾಹುಲ್, ಅಶ್ವಿನ್ ಬಗ್ಗೆ ವಿವಿಎಸ್ ಲಕ್ಷ್ಮಣ್ ಅವರ ವಿಶ್ಲೇಷಣೆ

ಮುಂಬೈ, ಸೆ.30: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಯಾವ ವರ್ಗದ ಕ್ರಿಕೆಟ್‌ನಲ್ಲಾದರೂ ಪರಿಪೂರ್ಣ ಬ್ಯಾಟ್ಸ್‌ಮನ್ ಎಂದು ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ಹೊಗಳಿದ್ದಾರೆ.
ತಮ್ಮ ಸಾಮರ್ಥ್ಯದ ಬಗ್ಗೆ ಸಮಗ್ರ ತಿಳುವಳಿಕೆ ಅವರಿಗಿದೆ. ಸುಭದ್ರವಾದ ಮೂಲ ಅಂಶಗಳನ್ನು ಒಳಗೊಂಡ, ಪರಿಪೂರ್ಣ ಕ್ರಿಕೆಟಿಗ ಎಂದು ದಿಲೀಪ್ ಸರ್‌ದೇಸಾಯಿ ಸ್ಮಾರಕ ಉಪನ್ಯಾಸದಲ್ಲಿ ವಿವರಿಸಿದರು. ಎಲ್ಲ ಮೂರು ಬಗೆಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಬಹುದಾದರೆ, ನಿಮ್ಮ ನೆಲೆಗಟ್ಟು ಭದ್ರವಾಗಿದೆ ಎಂದರ್ಥ ಎಂದರು.
ಯುವ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರ ಬಗ್ಗೆ ಕೂಡಾ ಮೆಚ್ಚುಗೆ ಮಾತುಗಳನ್ನಾಡಿದ ಲಕ್ಷ್ಮಣ್, "ಆತನ ಬ್ಯಾಟಿಂಗ್ ಶೈಲಿಯಲ್ಲಿ ಕೊಹ್ಲಿ ಪ್ರಭಾವ ಎದ್ದು ಕಾಣುತ್ತದೆ. ರಾಹುಲ್ ಇದೀಗ ಉತ್ತಮ ಟಿ-20 ಆಟಗಾರನಾಗಿಯೂ ರೂಪುಗೊಳ್ಳುತ್ತಿದ್ದಾರೆ. ರಾಹುಲ್ ಅವರ ಈ ವರ್ಗಾಂತರದಲ್ಲಿ ಕೊಹ್ಲಿ ಪ್ರಭಾವ ಇದೆ. ಎಲ್ಲ ಮೂರೂ ಬಗೆಯ ಕ್ರಿಕೆಟ್‌ನಲ್ಲಿ ಹೇಗೆ ರನ್ ಗಳಿಸಬೇಕು ಎನ್ನುವುದು ಗೊತ್ತು" ಎಂದು ಬಣ್ಣಿಸಿದರು.
37ನೇ ಟೆಸ್ಟ್ ಪಂದ್ಯದಲ್ಲೇ 200 ವಿಕೆಟ್ ಸಾಧನೆ ಮಾಡಿ, ಅತಿವೇಗದ ವಿಕೆಟ್ ದ್ವಿಶತಕ ಗಳಿಸಿದ ಎರಡನೆ ಆಟಗಾರ ಎಂಬ ಹೆಗ್ಗಳಿಕೆಯ ರವಿಚಂದ್ರನ್ ಅಶ್ವಿನ್ ಅವರನ್ನೂ ಲಕ್ಷ್ಮಣ್ ಹೊಗಳಿದರು. "ಆತ ಭಾರತಕ್ಕೆ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ನಿರಂತರವಾಗಿ ಅವರಲ್ಲಿ ಸುಧಾರಣೆ ಕಾಣುತ್ತಿದೆ. ಆತ ಜಾಣ್ಮೆಯ ಮ್ಯಾಚ್ ವಿನ್ನರ್. ಇಂಥವರನ್ನು ನಾನು ಸದಾ ಗೌರವಿಸುತ್ತೇನೆ" ಎಂದರು.





