ಭಾರತ ದಾಳಿ ನಡೆಸಿಲ್ಲವೆಂದ ಪಾಕ್ ಸೇನಾ ವಕ್ತಾರನಿಗೆ ಕೇರಳಿಗರ ತಕ್ಕ ಪ್ರತ್ಯುತ್ತರ

ಕೊಝಿಕ್ಕೋಡ್, ಸೆ.30: ಭಾರತೀಯ ಸೇನೆಯ ಸರ್ಜಿಕಲ್ ದಾಳಿಗಳಿಗೆ ಪಾಕಿಸ್ತಾನಿ ಸೇನೆ ತತ್ತರಿಸಿದ್ದರೆ, ಅತ್ತ ಪಾಕಿಸ್ತಾನದ ಮಿಲಿಟರಿ ವಕ್ತಾರ ಜನರಲ್ ಅಸೀಮ್ ಬಜ್ವ ಕೇರಳಿಗರಿಂದ ಬೇರೆಯೇ ವಿಧದ ದಾಳಿಗೆ ತುತ್ತಾಗಿದ್ದಾರೆ.
ಜನರಲ್ ಅಸೀಮ್ ಬಜ್ವ ಅವರ ಫೇಸ್ ಬುಕ್ ಪುಟವಂತೂ ಮಲಯಾಳಿ ಜನರ ವಾಗ್ದಾಳಿಗೆ ತುತ್ತಾಗಿದ್ದು, ಅದರಲ್ಲಿ ಕಮೆಂಟುಗಳು, ಟೀಕೆಗಳ ಮಹಾಪೂರವೇ ಹರಿದು ಬಂದಿದೆ. ಎಲ್ಲವೂ ಪಾಕಿಸ್ತಾನಿ ನ್ಯೂಸ್ ಚಾನಲ್ ಒಂದಕ್ಕೆ ಅವರು ನೀಡಿದ್ದ ಸಂದರ್ಶನದ ವೀಡಿಯೋ ಪೋಸ್ಟ್ ಮಾಡಿದ್ದಕ್ಕೆ ಬಂದ ಪ್ರತಿಕ್ರಿಯೆಗಳಾಗಿವೆ. ಭಾರತದಿಂದ ಸರ್ಜಿಕಲ್ ದಾಳಿಯಾಗಿದೆಯೆಂಬುದು ಆಧಾರರಹಿತ ಎಂದು ಅಸೀಮ್ ಬಜ್ವ ಆ ಸಂದರ್ಶನದಲ್ಲಿ ಹೇಳಿದ್ದರು.
ಕೆಲವರು ಥೇಟ್ ಮಲಯಾಳಿ ಶೈಲಿಯಲ್ಲಿ ‘ಪೋ ಮೋನೆ ದಿನೇಶ’ ಎಂದುಮಲಯಾಳಂ ಚಿತ್ರವೊಂದರ ಡೈಲಾಗನ್ನು ಹೊಡೆದರೆ. ಇನ್ನೊಬ್ಬರಂತೂ ‘‘ಜನರಲ್, ನಿಮಗೆ ಮಲಯಾಳಿಗಳ ಬಗ್ಗೆ ಗೊತ್ತೇನು? ಇನ್ನು ಮುಂದೆ ನೀವು ಮೋದಿ ಯಾ ಭಾರತೀಯ ಸೇನೆಯನ್ನು ಮರೆತರೂ ಮಲಯಾಳಿಗಳನ್ನು ಮರೆಯಲಿಕ್ಕಿಲ್ಲ. ನಿಮಗೇನಾದರೂ ಸಂಶಯವಿದ್ದರೆ ಮರಿಯಾ ಶರಪೋವಾ ಅವರನ್ನು ಕೇಳಿ’’ ಎಂದು ಬರೆದಿದ್ದರು. ತನಗೆ ಸಚಿನ್ ತೆಂಡುಲ್ಕರ್ ಯಾರೆಂದು ಗೊತ್ತಿಲ್ಲವೆಂದು ಕೆಲ ಸಮಯದ ಹಿಂದೆ ಶರಪೋವಾ ಹೇಳಿದಾಗ ಆಕೆ ಕೇರಳಿಗರ ಸಾಮಾಜಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದರು.
ತ್ರಿಶ್ಶೂರು ಪೂರಂ ಸಂದರ್ಭ ಆನೆಗಳನ್ನು ಪೆರೇಡ್ ನಡೆಸುವುದನ್ನು ಕೇರಳ ಸರಕಾರ ನಿಲ್ಲಿಸಬೇಕು ಎಂದು ಹೇಳಿದ್ದಕ್ಕೆ ಈ ಹಿಂದೆ ಹಾಲಿವುಡ್ ನಟಿ ಪಮೇಲಾ ಆಂಡರ್ಸನ್ ಕೂಡ ಕೇರಳಿಗರ ಕೋಪಕ್ಕೆ ತುತ್ತಾಗಿದ್ದರು. ಆಸ್ಟ್ರೇಲಿಯಾದ ಕ್ರಿಕೆಟರ್ ಮಿಚೆಲ್ ಜಾನ್ಸನ್, ನಟರಾದ ಪೃಥ್ವೀರಾಜ್ ಹಾಗೂ ಹಂಸಿಕಾ ಮೋಟ್ವಾನಿ ಕೂಡ ಕೇರಳಿಗರ ಆಕ್ರೋಶಕ್ಕೆ ತುತ್ತಾದವರಲ್ಲಿ ಸೇರಿದ್ದಾರೆ.





