ನಕಲಿ ಎನ್ ಕೌಂಟರ್ ಪ್ರಧಾನ ಆರೋಪಿಯಿಂದ ಭಯೋತ್ಪಾದನೆ ಸಂತ್ರಸ್ತರಿಗಾಗಿ ಹೊಸ ಎನ್ ಜಿ ಓ !

- ಸಹ ಆರೋಪಿ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ
- ಉದ್ಘಾಟನೆಗೆ ಅದ್ದೂರಿ ಕಾರ್ಯಕ್ರಮ ಆಯೋಜನೆ
ಅಹ್ಮದಾಬಾದ್, ಸೆ.30: ಸೊಹ್ರಾಬುದ್ದೀನ್ ಶೇಖ್ ಹಾಗೂ ಇಶ್ರತ್ ಜಹಾನ್ ‘ನಕಲಿ’ ಎನ್ ಕೌಂಟರ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರ ಹೊಸ ಎನ್ ಜಿಓ ಒಂದನ್ನು ಇಬ್ಬರು ನಿವೃತ್ತ ಐಪಿಎಸ್ ಅಧಿಕಾರಿಗಳ ಸಹಯೋಗದಿಂದ ಸ್ಥಾಪಿಸಿದ್ದಾರೆ. ಅವರಿಗೆ ಸಾಥ್ ನೀಡಲಿರುವವರಲ್ಲಿ ಗುಜರಾತ್ ರಾಜ್ಯದ ಪ್ರಥಮ ಮುಸ್ಲಿಮ್ ಡಿಜಿಪಿ ಆಗಿದ್ದ ಎಸ್.ಎಸ್. ಖಂಡ್ವವಾಲ ಕೂಡ ಸೇರಿದ್ದಾರೆ.
'ಜಸ್ಟಿಸ್ ಫಾರ್ ವಿಕ್ಟಿಮ್ಸ್ ಆಫ್ ಟೆರ್ರರಿಸಂ' ಎಂಬ ಹೆಸರಿನ ಈ ಎನ್ ಜಿಓ ಅಕ್ಟೋಬರ್ 9ರಂದು ನಗರದ ಟಾಗೋರ್ ಹಾಲ್ ನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭವೊಂದರಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಸಮಾರಂಭದಲ್ಲಿ ಇಶ್ರತ್ ಎನ್ ಕೌಂಟರ್ ಪ್ರಕರಣದಲ್ಲಿ ಸಹ ಆರೋಪಿಹಾಗೂ ಗುಪ್ತಚರ ಬ್ಯೂರೋ ಇದರ ಮಾಜಿ ವಿಶೇಷ ನಿರ್ದೇಶಕ ರಾಜಿಂದರ್ ಕುಮಾರ್ ವಿಶೇಷ ಆಹ್ವಾನಿತರಾಗಲಿದ್ದಾರೆಂದು ತಿಳಿದುಬಂದಿದೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಸಿ.ಪಟೇಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಮಾಜಿ ಐಪಿಎಸ್ ಅಧಿಕಾರಿ ಪ್ರಕಾಶ್ ಸಿಂಗ್ ಮುಖ್ಯ ಅತಿಥಿಗಳಾಗಲಿದ್ದಾರೆ.
ಈ ಹೊಸ ಎನ್ ಜಿಓ ಅಧ್ಯಕ್ಷರಾಗಿ ಖಂಡ್ವವಾಲ ಅವರಿದ್ದರೆ, ಮಹಾರಾಷ್ಟ್ರದ ನಿವೃತ್ತ ಡಿಜಿಪಿ ಕೆ.ಪಿ. ರಘುವಂಶಿ ಅದರ ಉಪಾಧ್ಯಕ್ಷರಾಗಿರುತ್ತಾರೆ. ವಂಝಾರ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ವಕೀಲರಾದ ವಿ.ಡಿ.ಗಜ್ಜರ್ ಕಾರ್ಯದರ್ಶಿಯಾಗಲಿದ್ದಾರೆ. ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಗಜ್ಜರ್ ಅವರು ವಂಝಾರ ಅವರ ವಕೀಲರಾಗಿದ್ದಾರೆ.
ಎರಡೂ ಎನ್ ಕೌಂಟರ್ ಪ್ರಕರಣಗಳಲ್ಲಿ ವಂಝಾರ ಕೆಲ ಸಮಯದ ಹಿಂದೆ ಜಾಮೀನು ಪಡೆದಿದ್ದರು. ತಮಗೆ ಜಾಮೀನು ದೊರೆತಂದಿನಿಂದ ಅವರು ರಾಜ್ಯದಾದ್ಯಂತ ಹಲವಾರು ಸಭೆಗಳಲ್ಲಿ ಭಾಷಣ ನೀಡುತ್ತಿದ್ದಾರೆ. ಕೆಲದಿನಗಳ ಹಿಂದೆ ಗೋಧ್ರಾದಲ್ಲಿ ಭಾಷಣ ಮಾಡಿದ ಅವರು, ಮದ್ರಸಗಳು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿವೆಯೆಂದು ಆರೋಪಿಸಿ ಅವುಗಳನ್ನು ಮುಚ್ಚಬೇಕೆಂದು ಆಗ್ರಹಿಸಿದ್ದರು.





