ಜಾತಿ ಜನಗಣತಿ ಬಗ್ಗೆ ಬಿಹಾರ್ ಉಪಮುಖ್ಯಮಂತ್ರಿ ಏನು ಹೇಳಿದ್ದಾರೆ ನೋಡಿ

ಪಾಟ್ನಾ, ಸೆ.30: ಜಾತಿ ಜನಗಣತಿಯ ವಿವರಗಳನ್ನು ಕೇಂದ್ರ ಸರಕಾರ ಬಹಿರಂಗಪಡಿಸಬೇಕೆಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ. ವಿವಿಧ ಜಾತಿಗಳ ಜನರ ಆರ್ಥಿಕ ಸ್ಥಿತಿಗತಿ ಹಾಗೂ ಅವರು ಯಾವ ವೃತ್ತಿಗಳಲ್ಲಿದ್ದಾರೆಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಯಾದವ್ ಹೇಳಿದ್ದಾರೆ.
ಜಾತಿ ಜನಗಣತಿ ವಿವರಗಳು ಬಹಿರಂಗಪಡಿಸಿದಲ್ಲಿ ವಿವಿಧ ಜಾತಿಗಳ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಹಣಕಾಸು ಒದಗಿಸಲು ಸಹಾಯವಾಗುತ್ತದೆ ಎಂದು ಹೇಳಿದ ಯಾದವ್, ‘‘ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿ ಕೆಟ್ಟದ್ದಾಗಿದೆ ಎಂದು ಸಾಚಾರ್ ಆಯೋಗ ವರದಿ ತಿಳಿಸಿದೆ’’ ಎಂದು ವಿವರಿಸಿದರು.
‘‘ಮುಸ್ಲಿಂ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಯಾ ಶಾಲೆಗೆ ಹೋಗುತ್ತಿದ್ದರೂ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ ಹಾಗೂ ನಿರುದ್ಯೋಗಿಗಳಾಗಿದ್ದಾರೆ ಎಂದು ಆಯೋಗದ ವರದಿ ಹೇಳಿದೆ. ಇಂತಹ ಯುವಕರ ಕಲ್ಯಾಣಕ್ಕೆ ಏನಾದರೂ ಕೊಡುಗೆ ನೀಡುವುದು ಸರಕಾರದ ಕರ್ತವ್ಯವೆಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಕೂಡ ಬಿಹಾರ ಚುನಾವಣೆಯ ಮೊದಲು ಜಾತಿ ಜನಗಣತಿ ವಿವರಗಳನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ್ದರು.





