ಜೈಲಿಗೆ ಹೋದರೂ ಪರವಾಗಿಲ್ಲ, ನೀರು ಬಿಡಬೇಡಿ: ರಾಜ್ಯ ಸರಕಾರಕ್ಕೆ ಜನಾರ್ದನ ಪೂಜಾರಿ ಸಲಹೆ

ಮಂಗಳೂರು, ಸೆ.30: ರಾಜ್ಯದ ಜನರಿಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ. ಆದ್ದರಿಂದ ತಮಿಳುನಾಡಿಗೆ ಅಕ್ಟೋಬರ್ 6ರವರೆಗೆ 6,000 ಕ್ಯೂಸೆಕ್ಸ್ ನೀರು ಬಿಡಬೇಕೆಂಬ ನ್ಯಾಯಾಂಗದ ನಿರ್ಧಾರ ತಪ್ಪು. ಇದಕ್ಕಾಗಿ ಜೈಲಿಗೆ ಹೋದರೂ ಪರವಾಗಿಲ್ಲ, ನೀರು ಬಿಡಬೇಡಿ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ನನ್ನ ಮೇಲೆ ನ್ಯಾಯಾಲಯ ಕ್ರಮ ತೆಗೆದುಕೊಂಡರೂ ಇದಕ್ಕೆ ಸಿದ್ದನಿದ್ದೇನೆ. ರಾಜ್ಯದ 6 ಕೋಟಿ ಜನರ ಪರವಾಗಿ ಜೈಲಿಗೆ ಹೋಗಲು ನಾನು ಸಿದ್ದ ಎಂದವರು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕಾವೇರಿ ನದಿ ನೀರು ಕುರಿತು ಸುಪ್ರೀಂಕೋರ್ಟ್‌ನ ಆದೇಶ ಆಘಾತಕಾರಿಯಾಗಿದ್ದು ಡ್ಯಾಂನಿಂದ ನೀರು ಬಿಡದೆ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ನಿರ್ಣಯವನ್ನು ರಾಜ್ಯ ಸರಕಾರ ಪಾಲಿಬೇಕು ಎಂದವರು ಹೇಳಿದರು.
ರಾಜ್ಯದ ಮೇಲೆ ಅನ್ಯಾಯದ ಮೇಲೆ ಅನ್ಯಾಯ ಆಗುತಾತಿ ಇದೆ. ನ್ಯಾಯಾಲಯದ ಆದೇಶ ಅನುಷ್ಟಾನ ಮಾಡಲು ನಮ್ಮಲ್ಲಿ ನೀರಿಲ್ಲ ಎಂದು ಕರ್ನಾಟಕ ಸರಕಾರ ಸುಪ್ರೀಂಕೋರ್ಟ್‌ಗೆ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದರೂ ನ್ಯಾಯಾಲಯ ಯಾಕೆ ಗೊಂದಲ ನಿರ್ಮಾಣ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ನ್ಯಾಯಾಲಯಕ್ಕೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣ ತಿಳಿದಿದೆಯೇ? ನೀರೇ ಇಲ್ಲದ ಮೇಲೆ ಎಲ್ಲಿಂದ ನೀರು ಬಿಡುವುದು. ಪರಿಪಾಲನೆ ಮಾಡಲು ಸಾಧ್ಯವೇ ಇಲ್ಲದ ಆದೇಶಗಳನ್ನು ನ್ಯಾಯಾಲಯ ಯಾಕೆ ನೀಡುತ್ತಿದೆ ಎಂದವರು ಪ್ರಶ್ನಿಸಿದರು.
ತಮಿಳುನಾಡಿನ ಮೆಟ್ಟೂರಿನಲ್ಲಿ ಸಾಕಷ್ಟು ನೀರು ಸಂಗ್ರಹವಿದೆ. ಕೃಷಿಗೂ ಅದರಿಂದ ನೀರು ಬಿಡಲಾಗುತ್ತಿದೆ. ಕರ್ನಾಟಕದಲ್ಲಿ ಕುಡಿಯಲು ನೀರಿಲ್ಲ . ತಮಿಳುನಾಡಿನಲ್ಲಿ ಅಕ್ಟೋಬರ್‌ನಿಂದ ಮಳೆ ಆರಂಭವಾಗುತ್ತದೆ.ಇದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಳ್ಳಬೇಕಾಗಿತ್ತು. ನೀರು ಬಿಡಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಕರ್ನಾಟಕದ ಶಾಸಕಾಂಗ ನಿರ್ಣಯ ಮಾಡಿದೆ. ನ್ಯಾಯಾಲಯದ ಆದೇಶ ಪಾಲನೆ ಮಾಡುವುದಿಲ್ಲ ಎಂದು ಕರ್ನಾಟಕ ಸರಕಾರವಾಗಲಿ, ರಾಜ್ಯದ ಜನತೆಯಾಗಲಿ ಹೇಳುತ್ತಿಲ್ಲ. ಆದರೆ ಆದೇಶ ಪರಿಪಾಲನೆ ಮಾಡದ ಪರಿಸ್ಥಿತಿಯನ್ನು ನ್ಯಾಯಾಂಗವೇ ಸೃಷ್ಟಿಸಿದೆ ಎಂದವರು ಹೇಳಿದರು.
ನೀರು ಬಿಡಬಾರದು ಎಂಬುದಾಗಿ ಸದನದಲ್ಲಿ ಬಿಜೆಪಿ, ಜೆಡಿಎಸ್ ನಿರ್ಣಯ ಮಂಡಿಸಿದೆ. ಈ ನಿರ್ಣಯವನ್ನು ಮುಖ್ಯಮಂತ್ರಿಯವರೇ ಮಂಡಿಸಿದ್ದರೆ ಇದಕ್ಕೆ ಹೆಚ್ಚು ಶಕ್ತಿ ಬರುತ್ತಿತ್ತು. ಆದರೂ ಪರವಾಗಿಲ್ಲ. ನಿರ್ಣಯ ಮಂಡಿಸಿರುವ ಜಗದೀಶ ಶೆಟ್ಟರ್ ಹಾಗೂ ಜೆಡಿಎಸ್ ವರಿಷ್ಠ ನಾಯಕ ದೇವೇ ಗೌಡ ಅವರು ಕೂಡಾ ಸುಪ್ರೀಂಕೋರ್ಟ್‌ಗೆ ಉತ್ತರ ನೀಡಬೇಕು ಎಂದರು.
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಷಷ್ಟ ಚಿತ್ರಣವನ್ನು ಆಸ್ಪತ್ರೆಯ ವೈದ್ಯರಾಗಲಿ, ಅಲ್ಲಿನ ಸರಕಾರವಾಗಲಿ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನ ರಾಜ್ಯಪಾಲರು ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ದೇಶದ ಜನತೆಗೆ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದರು.
ನಾರಿಮನ್ ಅವರು ಶುಕ್ರವಾರ ಮುಖ್ಯಮಂತ್ರಿಯವರ ಟಿಪ್ಪಣಿಯನ್ನು ನ್ಯಾಯಾಲಯಕ್ಕೆ ನೀಡಿ ಇದಕ್ಕಿಂತ ಹೆಚ್ಚಿನ ವಾದ ನನ್ನದಿಲ್ಲ ಎಂದು ಹೇಳಿದ್ದಾರೆ. ವಕೀಲರಾಗಿ ವಾದ ಮಾಡುವುದು ಅವರ ಕರ್ತವ್ಯ. ಮಾತ್ರವಲ್ಲದೆ, ಟಿಪ್ಪಣಿಯಲ್ಲಿ ಏನಿತ್ತು ಎಂಬುದನ್ನು ಅವರು ರಾಜ್ಯದ ಜನತಗೆ ಹೇಳಬೇಕು ಎಂದು ಜನಾರ್ದನ ಪೂಜಾರಿ ಅಭಿಪ್ರಾಯಿಸಿದರು.
ಮೂಡಾ ಮಾಜಿ ಅಧ್ಯಕ್ಷ ಡಾ. ಬಿ.ಜಿ. ಸುವರ್ಣ ಉಪಸ್ಥಿತರಿದ್ದರು.







