ಕಾವೇರಿ ನದಿ ವಿವಾದ ತೀರ್ಪು ದುರಂತ: ದೇವೇಗೌಡ

ಬೆಂಗಳೂರು, ಸೆ. 30: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಇದೀಗ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನೋಡಿದ್ದು, ಇದು ನಿಜಕ್ಕೂ ದುರಂತ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ನಾವೂ ಎಷ್ಟು ಮಾತನಾಡಿದರೂ ಅಷ್ಟೇ. ಮೂರು ಸದಸ್ಯರ ನ್ಯಾಯಪೀಠದ ಮುಂದೆ ಅ.18ರಂದು ಕಾವೇರಿ ಸಂಬಂಧದ ಅರ್ಜಿ ವಿಚಾರಣೆಗೆ ಬರಲಿದೆ. ಆದರೆ, ಅದಕ್ಕೂ ಮೊದಲೇ ದ್ವಿಸದಸ್ಯ ಪೀಠ ನೀಡಿರುವ ಆದೇಶ ತರಾತುರಿಯಿಂದ ಕೂಡಿದೆ ಎಂದು ಅವರು ವಿಶ್ಲೇಷಿಸಿದರು.
ಶುಕ್ರವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಕೇಂದ್ರ ಸಚಿವೆ ಉಮಾ ಭಾರತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರು ಬಿಡುವುದಿಲ್ಲ ಅಂತ ಹೇಳಿಲ್ಲ. ಎರಡೂ ರಾಜ್ಯಗಳ ಜಲಾಶಯಗಳಿಗೆ ತಜ್ಞರ ಸಮಿತಿ ಕಳುಹಿಸಿ ವಾಸ್ತವ ಸ್ಥಿತಿ ಪಡೆದು ಆ ಬಳಿಕ ಆದೇಶ ನೀಡಿ ಎಂದು ಕೋರಿದ್ದಾರೆ ಎಂದು ದೇವೇಗೌಡ ತಿಳಿಸಿದರು.
ನ್ಯಾಯಾಧೀಶರ ಬಗ್ಗೆ ತಾನೂ ಏನೂ ಮಾತನಾಡುವುದಿಲ್ಲ. ನಾವಿನ್ನು ಬದುಕಿದ್ದೇವೆ. ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಉದ್ವಿಗ್ನತೆಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮನವಿ ಮಾಡಿದರು.







