ಮೂರೇ ದಿನದಲ್ಲಿ ಮಂಡಳಿ ರಚನೆ ಮಾಡುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದ್ದು ದೊಡ್ಡ ಪ್ರಮಾದ ಹಿರಿಯ ವಕೀಲ ಬಿ ವಿ ಆಚಾರ್ಯ
ಈಗ ರಾಜ್ಯದ ಮುಂದಿರುವ ಮಾರ್ಗವೇನು ?

ಬೆಂಗಳೂರು, ಸೆ. 30: ಕಾವೇರಿಯಿಂದ ತಮಿಳುನಾಡಿಗೆ ಆರು ದಿನಗಳ ಕಾಲ ನಿತ್ಯ 6,000 ಕ್ಯೂಸೆಕ್ಸ್ ನೀರು ಹರಿಸಬೇಕು, ನಾಲ್ಕು ದಿನಗಳಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಇದೀಗ ಮತ್ತಷ್ಟು ಗೊಂದಲ ಸೃಷ್ಟಿಸಿದೆ. ದಸರಾ ಸಂಭ್ರದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಈ ಬಳುವಳಿ ಕಾವೇರಿಯಲ್ಲಿ ಸೂತಕದ ಛಾಯೆ ಆವರಿಸಿದೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಅದನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಆತುರ ತೋರುತ್ತಿರುವುದನ್ನು ನೋಡಿದರೆ ರಾಜ್ಯಕ್ಕೆ ನ್ಯಾಯ ಸಿಗುವ ಸಂದೇಹವಿದೆ.
ನಾಲ್ಕು ರಾಜ್ಯಗಳಿಗೆ ಸಂಬಂಧಪಟ್ಟ ಜಲ ನಿರ್ವಹಣಾ ಮಂಡಳಿಯನ್ನು ನಾಲ್ಕೇ ದಿನಗಳಲ್ಲಿ ಅನುಷ್ಠಾನಕ್ಕೆ ತರುವಂತೆ, ಒಂದೇ ದಿನದಲ್ಲಿ ಮಂಡಳಿಗೆ ಸದಸ್ಯರ ಹೆಸರನ್ನು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ನೀಡುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ರಾಜ್ಯಕ್ಕೆ ಭಾರೀ ಆಘಾತವುಂಟು ಮಾಡಿದೆ. ಅಕ್ಟೋಬರ್ 18 ರಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠದ ಮುಂದೆ ಜಲ ನಿರ್ವಹಣಾ ಮಂಡಳಿ ವಿಚಾರ ಬಾಕಿ ಇರುವಾಗ ವಿಭಾಗೀಯ ಪೀಠ ಆತುರ ತೋರಿದ್ದು, ಕೇಂದ್ರ ಸರಕಾರದ ಸಾಲಿಸೀಟರ್ ಜನರಲ್ ಮುಖುಲ್ ರಹ್ಟೋಗಿ ನಾಲ್ಕೇ ದಿನಗಳಲ್ಲಿ ನ್ಯಾಯಮಂಡಳಿ ರಚಿಸಲು ಸಿದ್ಧ ಎಂದು ಹೇಳಿರುವುದನ್ನು ನೋಡಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದರೆ ರಾಜ್ಯ ಸರಕಾರ ನ್ಯಾಯಾಂಗ ನಿಂದನೆಗೆ ಗುರಿಯಾಗುವ, ಇಲ್ಲವೆ ಸಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಆತಂಕಗಳು ಸಹ ಎದುರಾಗಿದೆ. ಮತ್ತೊಂದೆಡೆ ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ತಾಕಲಾಟಕ್ಕೆ ಸೃಷ್ಟಿಯಾಗುತ್ತಿರುವ ಸಂದೇಹಗಳು ಸಹ ಹುಟ್ಟಿಕೊಂಡಿವೆ. ಆದೇಶ ಅನುಷ್ಠಾನಗೊಳಿಸದಿದ್ದರೆ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಡಳಿತ ಜಾರಿಯಾಗುತ್ತದೆಯಾ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಕೆಲವರು ನ್ಯಾಯಾಂಗ ನಿಂದನೆಯಾಗುತ್ತದೆ ಎಂದರೆ ಮತ್ತೆ ಕೆಲವು ಕಾನೂನು ತಜ್ಞರು ರಾಜ್ಯದಲ್ಲಿ ಕುಡಿಯುವ ನೀರು ಹೊರತುಪಡಿಸಿ ಹೆಚ್ಚಿನ ಪ್ರಮಾಣದಲ್ಲಿ ನೀರು ಉಳಿಸಿಕೊಂಡಿದ್ದರೆ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದರೆ ಆಗ ನ್ಯಾಯಾಲಯ ನ್ಯಾಯಾಂಗ ನಿಂದನೆ ಪ್ರಕರಣ ಕೈಗೆತ್ತಿಕೊಳ್ಳಲು ಅವಕಾಶ ದೊರೆಯುತ್ತದೆ ಎನ್ನುತ್ತಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.
ನ್ಯಾಯಮೂರ್ತಿಗಳನ್ನು ನೇಮಿಸುವ ವ್ಯವಸ್ಥೆಯನ್ನು ರೂಪಿಸಿದ್ದು ಸಂಸತ್ತು. ಅಂದರೆ ಶಾಸಕಾಂಗ, ಇಂತಹ ಶಾಸಕಾಂಗ [ ವಿಧಾನಮಂಡಲ ] ಕೈಗೊಳ್ಳುವ ನಿರ್ಣಯವನ್ನು ನ್ಯಾಯಾಂಗ ವ್ಯವಸ್ಥೆ ಕಡೆಗಣಿಸಲು ಹೇಗೆ ಸಾಧ್ಯ?. 300 ಜನ ಶಾಸನ ಸಭಾ ಸದಸ್ಯರು ಕೈಗೊಂಡ ನಿರ್ಣಯವನ್ನು ನ್ಯಾಯಾಂಗ ವ್ಯವಸ್ಥೆ ಕಡೆಗಣಿಸಿದರೆ ಶಾಸಕಾಂಗದ ಘನತೆಗೆ ಧಕ್ಕೆಯಾಗುತ್ತದೆ. ಅದೇ ರೀತಿ ನ್ಯಾಯಾಲಯದ ತೀರ್ಪು ಉಲ್ಲಂಘಿಸಿದರೆ ರಾಜ್ಯ ಸರಕಾರ ತಪ್ಪು ಮಾಡಿದಂತಾಗುತ್ತದೆ. ಜನಾಭಿಪ್ರಾಯಕ್ಕೆ ವಿರುದ್ಧವಾಗುತ್ತದೆ. ಹೀಗೆ ಸಂವಿಧಾನಿಕ ಚೌಕಟ್ಟಿನಲ್ಲಿ ತಾಕಲಾಟಗಳು ನಡೆಯುತ್ತಲೇ ಇವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಿವೃತ್ತ ನ್ಯಾಯಮುರ್ತಿ ಕೆ.ಎಲ್. ಮಂಜುನಾಥ್ ವ್ಯಕ್ತಪಡಿಸಿದ ಅಭಿಪ್ರಾಯಗಳು ಅತ್ಯಂತ ಪ್ರಮುಖವಾಗಿವೆ.
ತಮ್ಮ ನ್ಯಾಯಾಂಗ ವ್ಯವಸ್ಥೆಯ 42 ವರ್ಷಗಳ ಅನುಭವದಲ್ಲಿ ಇಂತಹ ತೀರ್ಪು ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ವಕೀಲ ಫಾಲಿ ನಾರಿಮನ್ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡದೇ ದೊಡ್ಡ ತಪ್ಪು ಮಾಡಿದರು. ಮುಖ್ಯಮಂತ್ರಿ ನೀಡಿದ ಟಿಪ್ಪಣಿಯನ್ನು ನ್ಯಾಯಾಲಯಕ್ಕೆ ನೀಡಲು ನಾರಿಮನ್ ಏಕೆ ಬೇಕಿತ್ತು. ಈ ಕೆಲವನ್ನು ಬೇರೆ ಯಾರು ಬೇಕಾದರೂ ಮಾಡಬಹುದು. ವಕೀಲರ ನಡೆ ಉತ್ತಮ ನಡೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ವಕೀಲ ಬಿ ವಿ ಆಚಾರ್ಯ ಪ್ರತಿಕ್ರಯಸಿಸಿ ತಮಿಳುನಾಡಿಗೆ ಅವಶ್ಯವಿಲ್ಲ ಎಂದಾಗಲೂನೀರು ಬಿಡಿ ಎಂದು ಆದೇಶ ನೀಡಿದ್ದು ದೊಡ್ಡ ತಪ್ಪು. ಕಾವೇರಿ ನೀರುನಿರ್ವಹಣಾ ಮಂಡಳಿ ರಚನೆ ಅವಶ್ಯಕತೆಯೇ ಇಲ್ಲ. ಹೀಗಿದ್ದಾಗಲೂ ಮೂರೇ ದಿನದಲ್ಲಿ ರಚನೆ ಮಾಡಿ ಅಂದಿದ್ದು ಮತ್ತೊಂದು ತಪ್ಪು. ಜೊತೆಗೆ ಮಂಡಳಿ ರಚನೆಗೆ ಸಾಕಷ್ಟು ಸಮಯ ಬೇಕು ಹೀಗಿದ್ದಾಗ ಮೂರೇ ದಿನದಲ್ಲಿ ರಚನೆ ಮಾಡುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದ್ದು ಬಹುದೊಡ್ಡ ಪ್ರಮಾದವಾಗಿದೆ ಎಂದರು.
ಇದೀಗ ರಾಜ್ಯ ಸರಕಾರಕ್ಕೆ ಇರುವ ಮಾರ್ಗವೆಂದರೆ ಮಂಡಳಿ ರಚನೆ ಆದೇಶಕ್ಕೆ ತಡೆ ನೀಡಿ ಎಂದು ಮನವಿ ಮಾಡಬೇಕು. ಸುಪ್ರೀಂ ಕೋರ್ಟ್‌ನ ಕೋಪ ತಗ್ಗಿಸಲು ನೀರು ಬಿಡುಗಡೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಮತ್ತೇ ವಿಶೇಶ ಅಧಿವೇಶನ ಕರೆಯುವ ಅವಶ್ಯಕತೆ ಇಲ್ಲ. ಅಂದು ಅಧಿವೇಶನದಲ್ಲಿ ನಿರ್ಣಯ ಕೈಗೊಂಡಾಗ 27 ಟಿಎಂಸಿ ನೀರು ಇತ್ತು. ಇಂದು 36 ಟಿಎಂಸಿ ಇದೆ ಎನ್ನುವ ಮಾಹಿತಿ ಬಂದಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬೇಕಿಲ್ಲದಿದ್ದರೂ ಆದೇಶ ಪಾಲನೆಗಾದರೂ ನೀರು ಬಿಡಬೇಕಾಗಿದೆ. ನೀರು ಬಿಡುವುದರಿಂದ ಮುಂದೆ ರಾಜ್ಯದ ವಿರುದ್ಧ ಬರಬಹುದಾದ ತೀರ್ಪುಗಳು ಪ್ರಮಾಣ ಕಡಿಮೆಯಾಗಬಹುದು ಎಂದು ಆಚಾರ್ಯ ಪ್ರತಿಕ್ರಯಿಸಿದರು.
ಈ ಆದೇಶದ ಬೆನ್ನಲ್ಲೇ ಮುಂದಿಡಬೇಕಾದ ಹೆಜ್ಜೆಗಳ ಕುರಿತು ತೀರ್ಮಾನ ಕೈಗೊಳ್ಳಲು ಶನಿವಾರ ಸರ್ವಪಕ್ಷಗಳ ಸಭೆ ನಡೆಸಲು ತೀರ್ಮಾನಿಸಿದೆ.ಇದರಲ್ಲಿ ಉಭಯ ಸದನಗಳ ಸರ್ವಪಕ್ಷ ನಾಯಕರು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು, ಕಾವೇರಿ ನದಿ ಪಾತ್ರದ ಜಿಲ್ಲೆಗಳ ಸಚಿವರು, ಉಸ್ತುವಾರಿ ಸಚಿವರು, ನೀರಾವರಿ ಸಚಿವರು ಭಾಗವಹಿಸಲಿದ್ದಾರೆ.
ಒಂದೋ ನೀರು ಬಿಡುಗಡೆ ಮಾಡಬೇಕು ಇಲ್ಲವೇ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸಬೇಕು ಎಂಬ ಪರಿಸ್ಥಿತಿ ಉದ್ಭವವಾಗಿರುವ ಹಿನ್ನೆಲೆಯಲ್ಲಿ ಶನಿವಾರ ನಡೆಯಲಿರುವ ಸರ್ವಪಕ್ಷಗಳ ಸಭೆ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸರ್ವಪಕ್ಷಗಳ ಸಭೆಯ ನಂತರ ಮುಂದಿನ ಹೆಜ್ಜೆ ಇಡಲು ಮಂತ್ರಿ ಪರಿಷತ್ ಸಭೆ ನಡೆಯುವ ಸಂಭವಗಳಿದ್ದು ಇದಕ್ಕೂ ಮುನ್ನ ಸುಪ್ರೀಂಕೋರ್ಟ್ ಆದೇಶ ರಾಜ್ಯಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಕಾವೇರಿ ನದಿ ನೀರು ಹಂಚಿಕೆಯ ವಿವಾದ ತ್ರಿಸದಸ್ಯ ಪೀಠದ ಮುಂದೆ ಇರುವಾಗ ದ್ವಿಸದಸ್ಯ ಪೀಠ ಹೇಗೆ ಹಸ್ತಕ್ಷೇಪ ಮಾಡುತ್ತದೆ ಎಂದು ಪ್ರಶ್ನಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ನಾವೆಲ್ಲ ಇನೂ ಸತ್ತಿಲ್ಲ. ಮುಂದೇನಾಗುತ್ತದೋ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 18ರಂದು ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದ ಅರ್ಜಿ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.ಹೀಗೆ ಮೂವರು ನ್ಯಾಯಮೂರ್ತಿಗಳನ್ನುಳ್ಳ ಪೀಠದ ಮುಂದೆ ವಿವಾದ ಇರುವಾಗ ದ್ವಿಸದಸ್ಯ ಪೀಠ ಹೇಗೆ ಮಧ್ಯೆ ಪ್ರವೇಶಿಸಿ ಇಂತಹ ತೀರ್ಪು ನೀಡಲು ಸಾಧ್ಯ ಎಂದಿದ್ದಾರೆ.
ರಾಜ್ಯದ ಹಿತವನ್ನು ಬಲಿಗೊಟ್ಟು ನೀರು ಬಿಡಿ ಎಂಬುದು ಸರಿಯಲ್ಲ ಎಂದಿರುವ ದೇವೇಗೌಡ,ಈ ಕುರಿತು ಜನ ತಾಳ್ಮೆ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಕಿವಿ ಮಾತು ಹೇಳಿದ್ದಾರೆ.
ಇದೇ ರೀತಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಕೂಡಾ,ಜನರ ಹಿತಾಸಕ್ತಿ ರಕ್ಷಣೆಯ ದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನ ಸಂವಿಧಾನದ ಉಲ್ಲಂಘನೆಯಲ್ಲ ಎಂದು ಸಂವಿಧಾನ ರಚಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಹೇಳಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಮ್ಮ ಜನರ ಹಿತ ರಕ್ಷಿಸಲು ವಿಧಾನಮಂಡಲ ಒಂದು ತೀರ್ಮಾನ ಕೈಗೊಂಡಿದೆ.ಮುಂದೇನು ಮಾಡಬೇಕು ಎಂಬ ಸಂಬಂಧ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೂಡಾ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು ಕಾವೇರಿ ನದಿ ಪಾತ್ರದಲ್ಲಿ ನಾವು ಆಣೆಕಟ್ಟುಗಳನ್ನು ಕಟ್ಟಿರುವುದು ಕೇಂದ್ರದ ಕೈಗೆ ಬೀಗದ ಕೈ ಕೊಡಲು ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ನಮ್ಮ ವಿರೋಧವಿದೆ.ಯಾವ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ.ಮತ್ತೆ ಮೇಲ್ಮನವಿ ಸಲ್ಲಿಸುತ್ತೇವೆ.ಹೀಗಾಗಿ ಜನರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಹೇಳಿದ್ದಾರೆ.
ಶನಿವಾರ ಸಂಜೆ ಐದು ಗಂಟೆಗೆ ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.ಅಲ್ಲಿ ಈ ಕುರಿತು ವಿವರವಾಗಿ ಚರ್ಚಿಸುತ್ತೇವೆ.ರಾಜ್ಯದ ಹಿತ ಕಾಪಾಡಲು ನಾವು ಬದ್ಧ.ಈ ವಿಷಯದಲ್ಲಿ ಯಾವುದೇ ಅನುಮಾನ ಬೇಡ ಎಂದು ವಿವರಿಸಿದರು.







