ಉಳ್ಳಾಲ ನಗರಸಭಾ ಕೌನ್ಸಿಲರ್‌ಗಳಿಂದ ರಾತ್ರೋರಾತ್ರಿ ಸಚಿವ ಖಾದರ್ ಭೇಟಿ

ಉಳ್ಳಾಲ, ಸೆ. 30: ಉಳ್ಳಾಲ ನಗರಸಭೆಗೆ ನೂತನ ಪೌರಾಯುಕ್ತರಾಗಿ ಬಂದಿರುವ ರೇಖಾ ಶೆಟ್ಟಿ ಅವರನ್ನು ಒಂದಿಬ್ಬರು ಕೌನ್ಸಿಲರ್‌ಗಳಿಂದ ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೆಲವು ಕೌನ್ಸಿಲರ್‌ಗಳು ಗುರುವಾರ ಮಧ್ಯರಾತ್ರಿ ಸಚಿವ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ರೇಖಾಶೆಟ್ಟಿ ಅವರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿದ್ದಾರೆ.
ನಗರಸಭೆಯಾಗಿ ಘೋಷಣೆಯಾದ ಬಳಿಕ ರೂಪಾ ಶೆಟ್ಟಿ ಪ್ರಥಮ ಪೌರಾಯುಕ್ತರಾಗಿ ಅಧಿಕಾರ ಚಲಾಯಿಸಿದ್ದು ವರ್ಷದ ಬಳಿಕ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಎರಡನೆ ಪೌರಾಯುಕ್ತರಾಗಿ ರೇಖಾ ಶೆಟ್ಟಿ ಕಳೆದ ತಿಂಗಳು 23ರಂದು ಅಧಿಕಾರ ಸ್ವೀಕರಿಸಿದ್ದರು. ಆ ಸಂದರ್ಭ ಖಜಾನೆಯಲ್ಲಿದ್ದುದು ಬರೇ 35 ಸಾವಿರ ರೂ. ಮಾತ್ರ! ಅದಾಗಲೇ ಹಲವು ತಿಂಗಳಿಂದ ಬಿಲ್ ಬಾಕಿಯಿದೆ ಎನ್ನುವ ಕಾರಣಕ್ಕೆ ನಗರ ನಿರ್ವಹಣೆ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದರು. ಆದರೆ ಯಾವುದೋ ಮೂಲದಿಂದ ಐದು ಲಕ್ಷ ರೂಪಾಯಿಯನ್ನು ನೂತನ ಪೌರಾಯುಕ್ತರು ಪಾವತಿಸಿ ಕಾರ್ಮಿಕರು, ಜನಪ್ರತಿನಿಧಿಗಳ ಪಾಲಿಗೆ ದಿಟ್ಟ ಅಧಿಕಾರಿ ಎನಿಸಿಕೊಂಡಿದ್ದರು.
ಮೊಗವೀರ ಪಟ್ಣ ಬೀಚ್ ಬಳಿ ರಾಶಿ ಬಿದ್ದಿದ್ದ ತ್ಯಾಜ್ಯಕ್ಕೆ ಮುಕ್ತಿ ನೀಡಿ ಉದ್ಯಾನವನ ನಿರ್ಮಾಣ ಯೋಜನೆ ಹಮ್ಮಿಕೊಂಡರು. ಅಲ್ಲದೆ ಉಳ್ಳಾಲದಾದ್ಯಂತ ಅಲ್ಲಲ್ಲಿ ಕೊಳೆತು ನಾರುತ್ತಿದ್ದ ತ್ಯಾಜ್ಯಕ್ಕೆ ಮುಕ್ತಿ ನೀಡಿದ್ದರು. ಹಲವಾರು ವರ್ಷಗಳಿಂದ ಇರುವ ತೆರಿಗೆ ಪರಿಷ್ಕರಣೆ, ಅಕ್ರಮ ನೀರು ಸಂಪರ್ಕಕ್ಕೆ ಕಟ್ಟು ನಿಟ್ಟಿನ ಕ್ರಮ ಸಹಿತ ಇತರ ಯೋಜನೆಗಳ ಮುಖಾಂತರ ಆದಾಯ ಕ್ರೋಢೀಕರಣಕ್ಕೆ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಈ ನಡುವೆ ಒಂದಿಬ್ಬರು ಕೌನ್ಸಿಲರ್‌ಗಳು ರೇಖಾ ಶೆಟ್ಟಿಯವರನ್ನು ವರ್ಗಾಯಿಸಿ ತಮಗೆ ಬೇಕಾದ ಅಧಿಕಾರಿ ನೇಮಕಕ್ಕೆ ಪ್ರಯತ್ನಿಸುತ್ತಿರುವ ಮಾಹಿತಿ ಮತ್ತು ಶನಿವಾರ ನೂತನ ಪೌರಾಯುಕ್ತರು ಬರಲಿದ್ದಾರೆ ಎನ್ನುವ ಮಾಹಿತಿಯರಿತ ನಗರಸಭಾಧ್ಯಕ್ಷರ ಸಹಿತ ಕೌನ್ಸಿಲರ್‌ಗಳು ರಾತೋರಾತ್ರಿ ಸಚಿವ ಯು.ಟಿ.ಖಾದರ್ ರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಪೌರಾಯುಕ್ತರ ವರ್ಗಾವಣೆ ಬೇಡ ಎಂದು ಮನವಿ ಮಾಡಿದ್ದಾರೆ.







