ಆರೆಸ್ಸೆಸ್ ನಿಂದ ಜಯಲಲಿತಾ ಕೊಲೆ ಎಂದ ತಮಿಳಾಚಿ ಪೋಸ್ಟ್ !
ಪ್ರಕರಣ ದಾಖಲು

ಚೆನ್ನೈ, ಸೆ.30: ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ಹೆಸರಾಗಿರುವ ತಮಿಳಚಿ ವಿರುದ್ಧ ಚೆನ್ನೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ಆರೆಸ್ಸೆಸ್ ಹತ್ಯೆ ಮಾಡಿದೆ ಎಂಬ ಬಗ್ಗೆ ತನಗೆ ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ ಎಂದು ಫೇಸ್‌ಬುಕ್‌ನಲ್ಲಿ ಈಕೆ ಬರೆದುಕೊಂಡಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮುಖ್ಯಮಂತ್ರಿ ಜಯಲಲಿತಾ ಎರಡು ದಿನದ ಹಿಂದೆಯೇ ಮೃತಪಟ್ಟಿದ್ದಾರೆ. ಇವರನ್ನು ಆರೆಸ್ಸೆಸ್ ಹತ್ಯೆ ಮಾಡಿದೆ. ತಮಿಳ್ನಾಡಿನಲ್ಲಿ ಹಿಂಸಾಚಾರ ಹಬ್ಬಿಸುವ ಇರಾದೆಯಿಂದ ಆರೆಸ್ಸೆಸ್ ಈ ಕೃತ್ಯ ಎಸಗಿದೆ ಎಂದಾಕೆ ಫೇಸ್‌ಬುಕ್‌ನಲ್ಲಿ ಬರೆದಿದ್ದಾಳೆ. ಸ್ವಾತಿ ಕೊಲೆ ಪ್ರಕರಣ, ಹೊಸೂರು ವಿಶ್ವ ಹಿಂದೂ ಪರಿಷತ್ ಮುಖಂಡ ಸೂರಿ ಕೊಲೆ ಪ್ರಕರಣ, ಹಿಂದೂ ಮನ್ನಣಿ ಕಾರ್ಯಕರ್ತ ಶಶಿಕುಮಾರ್ ಕೊಲೆ ಪ್ರಕರಣಗಳನ್ನು ಉಲ್ಲೇಖಿಸಿರುವ ಈಕೆ, ಈ ಎಲ್ಲಾ ಪ್ರಕರಣಗಳಲ್ಲೂ ಮುಸ್ಲಿಮರನ್ನು ದೂಷಿಸಲಾಗಿದೆ. ರಾಜ್ಯದಲ್ಲಿ ಹಿಂದು-ಮುಸ್ಲಿಂ ದಂಗೆ ಹಬ್ಬಿಸುವ ಆರೆಸ್ಸೆಸ್ ಇರಾದೆಗೆ ಜಯಲಲಿತಾ ಅಡ್ಡಿಯಾಗಿರುವ ಕಾರಣ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬರೆಯಲಾಗಿದೆ. ಇದೆಲ್ಲಾ ಸುಳ್ಳು ಎಂದಾದರೆ ಸರಕಾರವು ಮುಖ್ಯಮಂತ್ರಿಯವರ ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸುವ ಮೂಲಕ ಎಲ್ಲಾ ಸಂದೇಹಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಐಎಡಿಎಂಕೆಯ ಐಟಿ ವಿಭಾಗವು , ಜಯಲಲಿತಾರ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸುತ್ತಿರುವ ತಮಿಳಚಿ ವಿರುದ್ಧ ದೂರು ನೀಡಿದೆ. ವಿವಿಧ ಸಮೂಹಗಳ ಮದ್ಯೆ ದ್ವೇಷ ಭಾವನೆ ಹರಡುವ ಯತ್ನ, ಪೊಲೀಸರು ಈಕೆಯ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಜಯಲಲಿತಾ ಸೆ.22ರಂದು ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಾಗಿದ್ದು ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಾನಾ ವದಂತಿ ಹರಡುತ್ತಿದೆ.





