ಕಾಡಾನೆ ಹಾವಳಿ ತಡೆಗೆ ಸರಕಾರ ವಿಫಲ: ನಾಚಪ್ಪ
‘ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕ್ರಮ’ ವಿಚಾರ ಸಂಕಿರಣ

ವೀರಾಜಪೇಟೆ, ಸೆ.30: ಕೊಡಗಿ ನಾದ್ಯಂತ ಕಾಡಾನೆ ಹಾವಳಿ ಮಿತಿ ಮೀರಿದ್ದು, ಜನರು ತಮ್ಮ ನೆಲ, ಜಲಗಳ ರಕ್ಷಣೆಗೋಸ್ಕರ ಮುಂದೆ ಎದುರಾಗುವ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುವ ಅನಿವಾರ್ಯತೆ ಬಂದಿದೆ. ಸರಕಾರ ಇದಕ್ಕೆ ಸ್ಪಂದಿಸದೆ ಇರುವುದು ವಿಪರ್ಯಾಸ ಎಂದು ಕೊಡಗು ಜಿಲ್ಲೆ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕ್ರು ನಾಚಪ್ಪವಿಷಾದ ವ್ಯಕ್ತಪಡಿಸಿದರು.
ಅಮ್ಮತ್ತಿ ರೈತ ಸಂಘದ ವತಿಯಿಂದ ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕ್ರಮ ಎಂಬ ವಿಚಾರ ಸಂಕಿರಣದಲ್ಲಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊಡಗಿನಾದ್ಯಂತ ಇಂದು ಕಾಡಾನೆ ಹಾವಳಿ ಮೀತಿ ಮೀರಿದೆ, ಶ್ರೀಮಂಗಲ ಭಾಗದಲ್ಲಿ ಕಾಡಾನೆ ಜೊತೆಗೆ ಕಾಡು ಕೋಣಗಳ ಹಾವಳಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಅರಣ್ಯ ಸಚಿವರನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಫಸಲು ಪಡೆಯಲು 6 ವರ್ಷ ಬೇಕಾದ ಕಾಫಿಗಿಡ ಒಂದಕ್ಕೆ 200 ರೂ. ಪರಿಹಾರ, ಸತ್ತವರಿಗೆ 5 ಲಕ್ಷ, ಬೆಳೆಹಾನಿಗೆ ಚಿಲ್ಲರೆ ಹಣ ನೀಡಲಾಗುತ್ತಿದೆ. ಹಿರಿಯ ಅರಣ್ಯ ಅಧಿಕಾರಿ ನೀಡಿದ ಭರವಸೆಯಂತೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಹೊಣೆ ಸರಕಾರದ್ದಾಗಿದೆ. ಮತಭೇದ ಮರೆತು ಜನ ಸಂಘಟಿತರಾಗಿ ಹೋರಾಟ ನಡೆಸಬೇಕು, ಇದರಲ್ಲಿ ಯುವ ಜನರು ಮುಖ್ಯ ಪಾತ್ರ ವಹಿಸಬೇಕು ಎಂದು ಶಂಕ್ರು ನಾಚಪ್ಪಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ಸಂಘದ ಸಂಚಾಲಕ ಕೇಚಂಡ ಕುಶಾಲಪ್ಪಮಾತನಾಡಿ, ಕೊಡಗಿನಲ್ಲಿ ಸ್ವಾತಂತ್ರ್ಯ ಕಾಲದಿಂದಲೂ ಕಾಡಾನೆ ಹಾವಳಿ ತಡೆಯಲು ಯಾವುದೇ ಶಾಶ್ವತ ಪರಿಹಾರ ಕ್ರಮ ಸರಕಾರ ತೆಗೆದು ಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಕಾಡಾನೆ ಹಾವಳಿ ಹೆಚ್ಚಿದೆ. ಅರಣ್ಯ ಇಲಾಖೆ ಇದೀಗ ಶಾಶ್ವತ ಪರಿಹಾರಕ್ಕಾಗಿ ಅಗತ್ಯವಾದ 260 ಕೋಟಿ ರೂ. ಪ್ರಸ್ತಾವನೆಗೆ ಶೀಘ್ರ ಮಂಜೂರಾತಿ ನೀಡಬೇಕು. ಕೊಡಗಿನ ಮೂರು ತಾಲೂಕುಗಳಲ್ಲಿ ಕಾಡಾನೆ ಹಾವಳಿಯನ್ನು ತಡೆಯಲು ಶಾಶ್ವತ ರಿಹಾರವನ್ನು ಸರಕಾರ ಶೀಘ್ರ ಅುಷ್ಠಾನಕ್ಕೆ ತರಬೇಕು, ಅಗತ್ಯ ಅನುದಾನ ಒದಗಿಸಬೇಕು ಎಂದರು.
ರೈತ ಸಂಘದ ಕಾನೂನು ಸಲಹೆಗಾರ ಬಿದ್ದಂಡ ಸುಬ್ಬಯ್ಯ, ರೈತ ಸಂಘದ ಕಾರ್ಯದರ್ಶಿ ಉದ್ದಪಂಡ ಜಗತ್ ಕೊಂಗಂಡ ಪೊನ್ನಪ್ಪ, ಅಚ್ಚಾಂಡಿರ ಬೋಪಣ್ಣ, ಕಾವಡಿಚಂಡ ಪೂಣಚ್ಚ ಮತ್ತಿತರರು ವಿಚಾರ ಮಂಡಿಸಿದರು.ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕುಟ್ಟಂಡ ಪ್ರಿನ್ಸ್ ಗಣಪತಿ ಸ್ವಾಗತಿಸಿ, ವಂದಿಸಿದರು. ರೈತ ಸಂಘದ ಸದಸ್ಯ ಮಾಚಿಮಂಡ ಸುರೇಶ್ ನಿರೂಪಿಸಿದರು.







