ವಿವಿಧ ಸಂಘ, ಸಂಸ್ಥೆಗಳಿಂದ ಕೊಡಗಿನಲ್ಲಿ ಬೃಹತ್ ಮೆರವಣಿಗೆ
ಭಾರತೀಯ ಸೇನೆಗೆ ನೈತಿಕ ಬೆಂಬಲ: ಸೈನಿಕರ ಕಾರ್ಯಕ್ಕೆ ಶ್ಲಾಘನೆ

ಮಡಿಕೇರಿ, ಸೆ.30: ಜಮ್ಮು ಕಾಶ್ಮೀರದ ಗಡಿಭಾಗದ ಪಿಒಕೆಯ ಒಳನುಗ್ಗಿ ಭಯೋತ್ಪಾದಕ ಕೇಂದ್ರಗಳ ಮೇಲೆ ಸೀಮಿತ ದಾಳಿ ನಡೆಸುವ ಮೂಲಕ ಭಯೋತ್ಪಾದಕರನ್ನು ಸದೆ ಬಡಿದು ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಭಾರತೀಯ ಯೋಧರಿಗೆ ನೈತಿಕ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ವಿವಿಧ ಸಂಘಟನೆ ಮತ್ತು ಸಂಘ ಸಂಸ್ಥೆಗಳು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಭಾರತೀಯ ಸೇನೆ ಪರ ಘೋ ಷಣೆಗಳನ್ನು ಕೂಗಿದರು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಿಂದ ಫೀ.ಮಾ.ಕಾರ್ಯಪ್ಪವೃತ್ತದವರೆಗೆ ಸಾಗಿದ ಅನೇಕರು ಸೇನಾ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಮುಖರು, ಕಾರ್ಯಕರ್ತರು, ಹಿಂದೂ ಪರ ಸಂಘಟನೆಗಳ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಪ್ಪವೃತ್ತದಲ್ಲಿ ಜಮಾಯಿಸಿ ಭಾರತೀಯ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ದೇಶದ ವೀರ ಸೇನಾನಿಗಳು ಪಿಒಕೆಯಲ್ಲಿನ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸುವ ಮೂಲಕ ಕೆಚ್ಚೆದೆಯನ್ನು ಪ್ರದರ್ಶಿಸಿದ್ದಾರೆ ಎಂದರು.
ನಗರ ಸಭೆಯ ಕಾಂಗ್ರೆಸ್ ಸದಸ್ಯ ಎ.ಸಿ.ದೇವಯ್ಯ ಮಾತನಾಡಿ, ಭಯೋತ್ಪಾದಕ ಕೃತ್ಯಗಳಿಗೆ ಪ್ರತಿಯಾಗಿ ಶಾಂತಿ ಮಂತ್ರವನ್ನಷ್ಟೆ ಪಠಿಸಿದರೆ ಸಾಲದು ಎನ್ನುವುದನ್ನು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಸೈನಿಕರು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಪಕ್ಷಾತೀತವಾಗಿ, ರಾಜಕೀಯ ರಹಿತವಾಗಿ ಬೆಂಬಲವನ್ನು ಸೂಚಿಸಬೇಕೆಂದು ಕರೆ ನೀಡಿದರು.
ಕೊಡಗು ಬ್ಯಾರೀಸ್ ಟ್ರಸ್ಟ್‌ನ ಅಧ್ಯಕ್ಷ ಬಿ.ಎ. ಶಂಸುದ್ದೀನ್ ಮಾತನಾಡಿ, ಭಯೋತ್ಪಾದಕರ ನೆಲೆಗಳನ್ನು ಧೂಳೀಪಟ ಮಾಡಿದ ಭಾರತೀಯ ಸೈನ್ಯದ ಕಾರ್ಯಾಚರಣೆ ನಿಜಕ್ಕೂ ಹೆಮ್ಮೆಯ ವಿಚಾರ ಎಂದರು. ಭಾರತೀಯ ಸೈನಿಕರ ಮನೋಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಬೆಂಬಲವನ್ನು ನೀಡಬೇಕೆಂದು ತಿಳಿಸಿದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಪ್ರಮುಖ ಜಿ. ಚಿದ್ವಿಲಾಸ್, ವಿಎಚ್‌ಪಿ ಪ್ರಮುಖ ಚಿ.ನಾ.ಸೋಮೇಶ್ ಮಾತನಾಡಿ, ಸೇನೆಯ ಕಾರ್ಯವನ್ನು ಶ್ಲಾಘಿಸಿದರು.
ಬಿಜೆಪಿಯ ಪ್ರಮುಖರಾದ ಮೊಂತಿ ಗಣೇಶ್, ರವಿಬಸಪ್ಪ, ಶರೀನ್ ಸುಬ್ಬಯ್ಯ ಮಹೇಶ್ ಜೈನಿ, ಕಾಂಗ್ರೆಸ್‌ನ ಅಂಬೆಕಲ್ ನವೀನ್, ಪ್ರಕಾಶ್ ಆಚಾರ್ಯ, ವೆಂಕಟೇಶ್, ಅಬ್ದುಲ್ ರಝಾಕ್, ಮೈನಾ, ಮಹೇಶ್ ಕುಮಾರ್, ಜೆಡಿಎಸ್‌ನ ಮುನೀರ್ ಅಹ್ಮ್ಮದ್, ಬೆಳೆಗಾರರ ಒಕ್ಕೂಟದ ಕೆ.ಕೆ.ವಿಶ್ವನಾಥ್, ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ, ಬ್ಯಾರೀಸ್ ಟ್ರಸ್ಟ್‌ನ ಎಂ.ಇ.ಮುಹಮ್ಮದ್, ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಕುಟ್ಟಪ್ಪ ಸೇರಿದಂತೆ ಹಲವು ಪ್ರಮುಖರು, ಸಾರ್ವಜನಿಕರು ಈ ಸಂದರ್ಭ ಹಾಜರಿದ್ದು, ಭಾರತೀಯ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಿದರು.







