ಅಭಿವೃದ್ಧಿ ಕೆಲಸಗಳು ಪಕ್ಷ ಸಂಘಟನೆಗೆ ಸಹಕಾರಿ: ಶಾಸಕ ಬಿ.ಬಿ.ನಿಂಗಯ್ಯ
ಪದಗ್ರಹಣ ಸಮಾರಂಭ

ಚಿಕ್ಕಮಗಳೂರು, ಸೆ.30: ಮೂಲಭೂತ ಸೌಕರ್ಯ ಸೇರಿದಂತೆ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಹೇಳುವ ಮೂಲಕ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಶಾಸಕ ಬಿ.ಬಿ.ನಿಂಗಯ್ಯ ಕರೆ ನೀಡಿದ್ದಾರೆ.
ಅವರು ಮೂಡಿಗೆರೆ ರೈತ ಭವನದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ನೂತನ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಸ್ತೆ, ಚರಂಡಿ, ಸಮುದಾಯ ಭವನ, ಕಾಲನಿಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕೊಟ್ಟು ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಕುರಿತು ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಹಳ್ಳಿಗೂ ತೆರಳಿ ಜನರ ಮನ ಮುಟ್ಟುವಂತೆ ಕೆಲಸದ ಬಗ್ಗೆ ಹೇಳಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಪಾಹಪಿಸುತ್ತಿರುವ ಗ್ರಾಮೀಣ ಪ್ರದೇಶದ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿ, ಸಾಮಾನ್ಯ ಜನರ ನಾಡಿಮಿಡಿತ ಅರ್ಥೈಸಿಕೊಂಡು ಬಡವರ ಕಷ್ಟಸುಖದಲ್ಲಿ ಭಾಗಿಯಾದರೆ, ಅವರ ಹಾರೈಕೆಯಿಂದ ಪಕ್ಷ ಗಟ್ಟಿಯಾಗುವ ಜೊತೆ ರಾಜಕೀಯದಲ್ಲಿ ನಮ್ಮ ವೈಯುಕ್ತಿಕ ವರ್ಚಸ್ಸು ಹೆಚ್ಚುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್.ದೇವರಾಜ್, ಸದಸ್ಯ ಬಾಲಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜಪ್ಪ, ಕಾರ್ಯಾಧ್ಯಕ್ಷ ಎಂ.ಸಿ.ಅಶೋಕ್, ನಿಕಟ ಪೂರ್ವ ಕ್ಷೇತ್ರ ಸಮಿತಿ ಅಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ, ಡಿ.ಆರ್.ಉಮಾಪತಿ, ತಾಪಂ ಸದಸ್ಯರಾದ ಮಹೇಶ್, ರಂಜನ್ ಅಜಿತ್‌ಕುಮಾರ್, ಅರ್ಪಿತಾ, ಮುಖಂಡರಾದ ನಿಡುವಾಳೆ ಚಂದ್ರು, ಎಚ್.ಎನ್.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.







