ಭಾರತ-ಪಾಕ್ ಒಂದೇ ಗುಂಪಿನಲ್ಲಿಡದಂತೆ ಐಸಿಸಿಗೆ ಬಿಸಿಸಿಐ ಮನವಿ

ಮುಂಬೈ, ಸೆ.30: ಮುಂಬರುವ ದಿನಗಳಲ್ಲಿ ಬಹು ರಾಷ್ಟ್ರಗಳು ಭಾಗವಹಿಸುವ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಯಂತಹ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳನ್ನು ಒಂದೇ ಗುಂಪಿನಲ್ಲಿ ಇರದಂತೆ ಮಾಡಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ(ಐಸಿಸಿ) ಬಿಸಿಸಿಐ ಮನವಿ ಮಾಡಿದೆ.
ಶುಕ್ರವಾರ ಇಲ್ಲಿ ನಡೆದ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಬಿಸಿಸಿಐ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
‘‘ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಕೇಂದ್ರ ಸರಕಾರ ಹೊಸ ರಣತಂತ್ರವನ್ನು ರೂಪಿಸುತ್ತಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಹಾಗೂ ದೇಶದ ಜನರ ಅಭಿಪ್ರಾಯದಂತೆ ಮುಂಬರುವ ಮಲ್ಟಿ-ನೇಶನ್ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಬಾರದು ಎಂದು ನಾವು ಐಸಿಸಿಗೆ ಮನವಿ ಮಾಡಲಿದ್ದ್ಧೇವೆ. ಒಂದು ವೇಳೆ ಉಭಯ ತಂಡಗಳು ಸೆಮಿಫೈನಲ್‌ಗೆ ತಲುಪಿದರೆ, ಪರಸ್ಪರ ಮುಖಾಮುಖಿಯಾಗುತ್ತದೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ’’ ಎಂದು ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಭಾರತ ಇನ್ನು ಏಳು ತಿಂಗಳ ಬಳಿಕ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಆಯೋಜಿತ ಬಹುರಾಷ್ಟ್ರಗಳ ಟೂರ್ನಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿದೆ. ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಐಸಿಸಿ ಈ ತನಕ ನಡೆದ ಮಲ್ಟಿ ನೇಶನ್ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ತಂಡವನ್ನು ಒಂದೇ ಗುಂಪಿನಲ್ಲಿ ಇಡುತ್ತಿತ್ತು. ಭಾರತ ತಂಡ ಈಗಾಗಲೇ ಪಾಕ್ ವಿರುದ್ಧದ ದ್ವಿಪಕ್ಷೀಯ ಸರಣಿಯನ್ನು ಆಡುವುದನ್ನು ನಿಲ್ಲಿಸಿದೆ. ಇತ್ತೀಚೆಗೆ ಉರಿಯಲ್ಲಿ ಪಾಕ್ ಉಗ್ರರ ದಾಳಿಯ ಬಳಿಕ ಪರಿಸ್ಥಿತಿ ಹದಗೆಟ್ಟಿದೆ.







