‘‘ಯೆತ್ನಳ್ಳ’’ ಎತ್ತಿನ ಹೊಳೆಯಾದ ಬಗೆ...

ಭಾಗ-2
ಗುಂಡ್ಯ ಜಲ ವಿದ್ಯುತ್ ಯೋಜನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಯಿತು. ಸುಂದರಲಾಲ ಬಹುಗುಣ ಅವರೂ ಬಂದು ಈ ಹೋರಾಟದಲ್ಲಿ ಭಾಗಿಯಾದರು. ನಮ್ಮೂರಿನಲ್ಲೂ ಒಂದು ರಾತ್ರಿ ಉಳಿದರು. ನಮ್ಮ ರಂಗಮಂದಿರದಲ್ಲಿ ಕುಳಿತು ಜನರನ್ನು ಭೇಟಿಯಾದರು ಮಾತನಾಡಿದರು. ಅವರೂ ಕೂಡಾ ರಂಗಕರ್ಮಿಗಳೆಂದು ನಮಗೆ ತಿಳಿದ್ದು ಆಗಲೇ. ಪೂರ್ಣಚಂದ್ರ ತೇಜಸ್ವಿ ರಂಗಮಂದಿರದ ಆಹ್ಲಾದಕರ ಪರಿಸರದಿಂದ ಖುಷಿಗೊಂಡಂತಿದ್ದ ಬಹುಗುಣ ಲಹರಿಬಂದಂತೆ ಮಾತನಾಡುತ್ತ ಹೋದರು. ಚಿಪ್ಕೊ ಚಳುವಳಿಯಿಂದ ಆರಂಭಿಸಿದ ಅಜ್ಜನ ಮಾತು ಹೆಚ್ಚಾಗಿ ರಂಗಭೂಮಿಯ ಸುತ್ತಲೇ ತಿರುಗಿತು. ಬೀದಿ ನಾಟಕ, ಹಾಡುಗಳ ಮೂಲಕ ಜನ ಸಂಘಟನೆ ಮಾಡಿದ ದಿನಗಳನ್ನು ನೆನಪಿಸಿಕೊಂಡು ಉತ್ಸಾಹದಿಂದ ಮಾತನಾಡಿದರು. ‘‘ಭಾಷಣಕ್ಕೆ ಬಾಯಿ ಮಾತ್ರ ಇದೆ, ಆದರೆ ರಂಗಭೂಮಿಗೆ ಬಾಯಿ, ಕಣ್ಣು, ಕಿವಿ ಎಲ್ಲವೂ ಇವೆ ಹಾಗಾಗಿ ಯಾವುದೇ ಚಳವಳಿಗೂ ರಂಗಭೂಮಿ ಅತ್ಯಂತ ಶಕ್ತ ಮಾಧ್ಯಮ ನಾಟಕಗಳನ್ನು ನೋಡಲು ಮಕ್ಕಳು ದೊಡ್ಡವರು ಮಹಿಳೆಯರು, ಎಲ್ಲರೂ ಬರುತ್ತಾರೆ ಅದರಲ್ಲೂ ಮಹಿಳೆಯರು ಸ್ವಾಭಾವಿಕವಾಗಿ ಹೆಚ್ಚು ಕರುಣಾಮಯಿಗಳು, ನಾಟಕ ನೇರವಾಗಿ ಹೃದಯಕ್ಕೆ ತಟ್ಟುವುದರಿಂದ ಅದರ ಪರಿಣಾಮ ಮಹಿಳೆಯರಲ್ಲಿ ಹೆಚ್ಚಿನದಾಗಿರುತ್ತದೆ. ಅದರಿಂದ ಚಳುವಳಿಗೂ ಹೆಚ್ಚಿನ ಬಲ ಬರುತ್ತದೆ’’ ಎಂದ ಅವರು, ‘‘ನೀವು ಈ ಪರಿಸರ ಕಾಳಜಿಯ ಯಾತ್ರೆಯನ್ನು ರಂಗಕ್ರಿಯೆಗಳ ಮೂಲಕವೂ ಮುಂದು ವರಿಸಿ, ಈ ಕೆಲಸವನ್ನು ಯಾವ ಭಾಷಣಕಾರರಾಗಲೀ ಸರಕಾರವಾಗಲೀ ಮಾಡಲಾಗದು’’ ಎಂದರು. ಪರಿಸರ ಯಾತ್ರೆಯ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತ ‘‘ನಾವು ಮಾಡುವ ಈ ಕೆಲಸ ಮನುಷ್ಯರಿಗೆ ಮಾತ್ರವಲ್ಲ ಇಡೀ ಭೂಮಂಡಲದ ಉಳಿವಿಗೆ ಆ ಮೂಲಕ ಸಕಲ ಜೀವರಾಶಿಯ ಉಳಿವಿಗೆ ಅಗತ್ಯ ಆದರೆ ನಮಗೆ ಹಿರಿಯರಿಗೆ ಇನ್ನು ಹೆಚ್ಚು ಕಾಲಾವಕಾಶ ಉಳಿದಿಲ್ಲ. ನಮ್ಮ ಮುಂದಿರುವ ಈ ಎಳೆಯರಿಗೆ ಸಾಕಷ್ಟು ಅವಕಾಶವಿದೆ ಆದ್ದರಿಂದ ಮಕ್ಕಳೇ ನಮ್ಮ ಮುಂದಿನ ಭರವಸೆ’’ ಎಂದ ಅವರು, ‘‘ನಿಮ್ಮ ಪರಿಸರ ಯಾತ್ರೆಗೆ ನಾನೇನು ಕೊಡಬಲ್ಲೆ ಒಂದು ಧ್ಯೇಯವಾಕ್ಯ ನೀಡುತ್ತೇನೆ. ಇದು ನಿಮ್ಮ ಚಿಂತನೆಯಲ್ಲಿರಲಿ, ಇದೇ ಪರಿಸರದ ಉಳಿವಿಗೆ ದಾರಿ ತೋರುತ್ತದೆ’’ ಎಂದರು.
ನಿಧಾನವಾಗಿ ಗುಂಡ್ಯ ಜಲವಿದ್ಯುತ್ ಯೋಜನೆ ಹಿನ್ನೆಲೆಗೆ ಸರಿಯಿತು. ಸಂದರ್ಭದಲ್ಲಿ ‘‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’’ ಎಂಬ ಬೀದಿ ನಾಟಕ ವನ್ನು ನಾವು (ಜೈಕರ್ನಾಟಕ ಸಂಘ ಬೆಳ್ಳೇಕೆರೆ) ಸಿದ್ಧಪಡಿಸಿಕೊಂಡು ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿದೆವು. ಮೈಸೂರಿನ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲೂ ಇದನ್ನು ಪ್ರದರ್ಶಿಸಿದೆವು. ಸ್ವಲ್ಪಸಮಯದ ಹಿಂದಷ್ಟೇ ಮೈಸೂರು ನಗರಕ್ಕೇ ಕಾಡಾನೆ ನುಗ್ಗಿ ಬಂದು ಇಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದರು.
ಮಲೆನಾಡಿನಲ್ಲಿ ಆನೆಗಳು ಅನೇಕ ವರ್ಷಗಳಿಂದಲೂ ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿ. ಮಲೆನಾಡಿನ ಜನ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲೂಕುಗಳ ದಟ್ಟ ಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದು ಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯತ್ತದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಮನುಷ್ಯನನ್ನೂ ಬದಲಿಸಿಬಿಟ್ಟಿವೆ. ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ.
ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತವು, ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸಿದರು. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋದವು. ಪರಂಪರಾಗತ ಆನೆದಾರಿಗಳು ತುಂಡರಿಸಿಹೋದವು. ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯೆತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡು ತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ್ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾ ದಂಧೆೆಯಂತಹ ಕಾನೂನುಬಾಹಿರ ಕೃತ್ಯಗಳು ಕೂಡಾ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ದೊಡ್ಡಪ್ರಮಾಣದಲ್ಲಿ ತೊಂದರೆಯನ್ನುಂಟುಮಾಡಿವೆ.
ಇಷ್ಟೆಲ್ಲ ಆಗುವಾಗಲೂ ನಮ್ಮ ‘‘ಯೆತ್ನಳ್ಳ’’ ತಣ್ಣಗೆ ಹರಿಯುತ್ತಲೇಇತ್ತು.
ಕೋಲಾರ- ತುಮಕೂರು ಪ್ರದೇಶಗಳಿಗೆ ನೀರೊದಗಿಸುವ ಪ್ರಸ್ತಾಪ ಬಂದಾಗಲೂ ಮೊದಲಿಗೆ ರಾಜಕಾರಣಿಗಳು ಹೇಳಿದ್ದು ಪಶ್ಚಿಮಕ್ಕೆ ಹರಿದು ‘ವ್ಯರ್ಥ’ವಾಗುತ್ತಿರುವ ನೇತ್ರಾವತಿ ನದಿಯ ಬಗ್ಗೆಯೇ. ಆದರೆ ಜನರ ವಿರೋಧದ ಸುಳಿವು ಸಿಕ್ಕಿದೊಡನೆಯೇ ಅವರ ಭಾಷೆ ನುಡಿಕಟ್ಟುಗಳು ಬದಲಾದವು. ನೇತ್ರಾವತಿ ನದಿಯ ಬದಲಾಗಿ ಘಟ್ಟದ ಮೇಲ್ಭಾಗದಲ್ಲಿ ಪಶ್ಚಿಮದತ್ತ ಹರಿಯುವ ಎತ್ತಿನ ಹಳ್ಳದಂತಹ ಸಣ್ಣ ಸಣ್ಣ ಹೊಳೆಗಳನ್ನು ಒಗ್ಗೂಡಿಸಿ, ಬಯಲು ಸೀಮೆಯ ಜನರಿಗೆ ಕುಡಿಯುವ ನೀರೊದಗಿಸುವ ಅತ್ಯಂತ ಅಗತ್ಯದ ಯೋಜನೆಯಿದೆಂದು ಬಿಂಬಿಸಿದರು. ಮಲೆನಾಡಿನ ಮತ್ತು ಕರಾವಳಿಯ ಜನರಿಗೆ ಹೀಗೆ ಹೇಳಿ, ಬಯಲು ಸೀಮೆಯ ಜನರ ಮುಂದೆ ಇಪ್ಪತ್ತನಾಲ್ಕು ಟಿ.ಎಂ.ಸಿ ನೀರಿನ ಚಿತ್ರಣ ನೀಡಿದರು. ಇಷ್ಟು ನೀರೊದಗಿಸುವ ಜಲಮೂಲ ಸಣ್ಣ ‘ಹಳ್ಳ’ವಾಗಿರಲು ಸಾಧ್ಯವಿಲ್ಲ ಎಂದೋ ಏನೋ. ‘‘ಎತ್ತಿನ ಹಳ್ಳ’’ ಮೊದಲು ರಾಜಕಾರಣಿಗಳ ಬಾಯಲ್ಲಿ ನಂತರ ವ್ಯಾಪಕವಾಗಿ ಮಾಧ್ಯಮಗಳಲ್ಲಿ ‘‘ಎತ್ತಿನಹೊಳೆ’’ ಯೋಜನೆಯಾಯಿತು.
ಹೀಗೆ ನಮ್ಮ ‘‘ಯೆತ್ನಳ್ಳ’’ ಎತ್ತಿನಹೊಳೆಯಾಗಿ ಲೋಕವಿಖ್ಯಾತವಾಯಿತು.
ಕಳೆದ ಮೂರು ದಶಕಗಳಲ್ಲಿ ಬೇರೆ ಕಡೆಗಳಂತೆ ಮಲೆನಾಡಿನಲ್ಲೂ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇಲ್ಲಿನ ಯುವಜನರು ವಿದ್ಯಾವಂತರಾಗಿ, ಕುಶಲಕರ್ಮಿಗಳಾಗಿ ಬೇರೆಡೆಗೆ ಹೋಗಿದ್ದರೂ, ಗದ್ದೆ ಬೇಸಾಯವನ್ನುಳಿದು ಇತರ ಕಾಫಿ, ಮೆಣಸು, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳ ಕೃಷಿ ಹೆಚ್ಚಾಗಿದೆ. ಯಂತ್ರೋಪಕರಣಗಳ ಬಳಕೆ, ನೀರಾವರಿ ಎರಡೂ ಹೆಚ್ಚಳವಾಗಿದ್ದು ನೀರಿನ ಬಳಕೆ ಗಣನೀಯವಾಗಿ ಹೆಚ್ಚಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಾಫಿ ತೋಟಗಳು, ವ್ಯಾಪಕವಾಗಿ ಕಾರ್ಪೊರೇಟ್ ಧನಿಗಳ ಕೈಸೇರುತ್ತಿದೆ. ಇವರು ದೊಡ್ಡ ಪ್ರಮಾಣದಲ್ಲಿ ಹೊರರಾಜ್ಯಗಳಿಂದ ಕೂಲಿಕಾರ್ಮಿಕರನ್ನು ಕರೆತರುತ್ತಿರುವುದರಿಂದ, ಜನವಸತಿ ಹೆಚ್ಚಾಗುತ್ತಿದೆ. ಇದರೊಂದಿಗೆ ಸರಕಾರದ ಅನೇಕ ಯೋಜನೆಗಳ ಮೂಲಕ ಸ್ವಂತ ನಿವೇಶನ-ಮನೆ ಹೊಂದಿದವರೂ ಹೆಚ್ಚಾಗಿದ್ದಾರೆ. ಇವೆಲ್ಲವೂ ಸೇರಿ ಮಲೆನಾಡಿನಲ್ಲೂ ಕೃಷಿ ಮಾತ್ರವಲ್ಲ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚಿದೆ. ಕಳೆದೆರಡು ದಶಕಗಳಲ್ಲಿ ಕೊರೆದ ಕೊಳವೆಬಾವಿಗಳು ನಿರುಪಯುಕ್ತವಾಗಿವೆ. ಆದ್ದರಿಂದ ಇಲ್ಲೂ ಸಹ ಹಳ್ಳ-ಹೊಳೆಗಳ ನೀರನ್ನೇ ಜನರು ಬಳಸತೊಡಗಿದ್ದಾರೆ.
ಎತ್ತಿನಹಳ್ಳದ ಜಲಾನಯನ ಪ್ರದೇಶದಲ್ಲೇ ಸುಮಾರು ಏಳೆಂಟು ಸಾವಿರ ಎಕರೆಗಳಷ್ಟು, ಕಾಫಿ ತೋಟಗಳಿವೆ. ಏಲಕ್ಕಿ ಮೆಣಸು, ಅಡಿಕೆ ಬೆಳೆಯೂ ಸಾಕಷ್ಟಿದೆ. ಈ ಪ್ರದೇಶದಲ್ಲೇ ಬರುವ ಹೆಗ್ಗದ್ದೆ, ದೋಣಿಗಾಲ್, ಕುಂಬರಡಿ, ನಡಹಳ್ಳಿ, ಹೆಬ್ಬಸಾಲೆ, ಮಾವಿನಕೂಲು, ಗಾಣದಹೊಳೆ, ರಕ್ಷಿದಿ, ಕ್ಯಾಮನಹಳ್ಳಿ, ಅಗಲಟ್ಟಿ ಮುಂತಾದ ಗ್ರಾಮಗಳಿವೆ. ಇವುಗಳಲ್ಲಿ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿಗೂ ಇಂದು ಎತ್ತಿನಹಳ್ಳದ ನೀರೇ ಆಧಾರ. ಈ ಎಲ್ಲಾ ಗ್ರಾಮಪಂಚಾಯತ್‌ಗಳು ಕುಡಿಯುವ ನೀರಿನ ಯೋಜನೆಯಲ್ಲಿ ಎತ್ತಿನಹಳ್ಳದ ನೀರನ್ನು ಬಳಸುತ್ತಿವೆ. ಈ ಎಲ್ಲ ಕಾರಣಗಳಿಂದ ಕಡು ಬೇಸಗೆಯಲ್ಲಿ ಎತ್ತಿನಹಳ್ಳ ಸಂಪೂರ್ಣ ಬರಿದಾಗುವ ಹಂತ ತಲಪಿರುತ್ತದೆ.







