ಸಿಬಿಐ ಅಧಿಕಾರಿಗಳ ಜೊತೆ ಅಮಿತ್ ಶಾ ನಂಟಿನ ತನಿಖೆಯಾಗಲಿ: ಕೇಜ್ರಿವಾಲ್
ಹೊಸದಿಲ್ಲಿ, ಸೆ.30: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಹಿರಿಯ ಅಧಿಕಾರಿ ಬಿ. ಕೆ. ಬನ್ಸಲ್ ತಮ್ಮ ಸುಸೈಡ್ ನೋಟ್‌ನಲ್ಲಿ ಉಲ್ಲೇಖಿಸಿದ್ದ ಸಿಬಿಐ ಅಧಿಕಾರಿಗಳಿಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೂ ನಡುವೆ ಇರುವ ನಂಟಿನ ತನಿಖೆಯಾಗಬೇಕೆಂದು ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದಾರೆ.
''ಬನ್ಸಲ್ ಅವರ ಸುಸೈಡ್ ನೋಟ್ ಓದಿದೆ. ಸಂಜೀವ್ ಗೌತಮ್(ಸಿಬಿಐ ಡಿಐಜಿ) ಅವರನ್ನು ಕೂಡಲೇ ಬಂಧಿಸಬೇಕು, ಅಮಿತ್ ಶಾ ಹಾಗೂ ಅವರ ನಡುವಣ ನಂಟನ್ನು ತನಿಖೆ ನಡೆಸಬೇಕು'' ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ಬನ್ಸಲ್ ತಮ್ಮ ಪುತ್ರನೊಂದಿಗೆ ಪೂರ್ವ ದಿಲ್ಲಿಯ ನೀಲಕಂಠ ಅಪಾರ್ಟ್‌ಮೆಂಟ್‌ನಲ್ಲಿರುವ ತಮ್ಮ ಮನೆಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮನ್ನಲ್ಲದೆ ಜುಲೈ 19ರಂದು ಆತ್ಮಹತ್ಯೆ ಮಾಡಿಕೊಂಡ ತಮ್ಮ ಪತ್ನಿ ಹಾಗೂ ಪುತ್ರಿಯನ್ನೂ ಸಿಬಿಐ ಅಧಿಕಾರಿಗಳು ಹಿಂಸಿಸಿದ್ದರು'' ಎಂದು ಬನ್ಸಲ್ ತಮ್ಮ ಸುಸೈಡ್ ನೋಟ್‌ನಲ್ಲಿ ಹೇಳಿಕೊಂಡಿದ್ದರಲ್ಲದೆ ಸಿಬಿಐ ಡಿಐಜಿ ಸಂಜೀವ್ ಗೌತಮ್ ಅಲ್ಲದೆ, ಎಸ್ಪಿ ಅಮೃತಾ ಕೌರ್, ಡಿವೈಎಸ್ಪಿರೇಖಾ ಸಂಗವನ್, ತನಿಖಾಧಿಕಾರಿ ಹರ್ನಾಮ್ ಸಿಂಗ್ ಕೊಂದಿದ್ದಾರೆ' ಎಂದು ಬನ್ಸಲ್ ಬರೆದಿದ್ದಾರೆಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಸಿಬಿಐ ಡಿಐಜಿ ಯವರನ್ನು ಬನ್ಸಾಲ್ 'ಅಮಿತ್ ಶಾ ಅವರ ವ್ಯಕ್ತಿ' ಎಂದೂ ಉಲ್ಲೇಖಿಸಿದ್ದರೆನ್ನಲಾಗಿದೆ.
............................
ಜಾತಿ ಜನಗಣತಿ ವಿವರ ಬಹಿರಂಗಕ್ಕೆ ಆಗ್ರಹ
ಪಾಟ್ನಾ, ಸೆ.30: ಜಾತಿ ಜನಗಣತಿಯ ವಿವರಗಳನ್ನು ಕೇಂದ್ರ ಸರಕಾರ ಬಹಿರಂಗಪಡಿಸಬೇಕೆಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ. ವಿವಿಧ ಜಾತಿಗಳ ಜನರ ಆರ್ಥಿಕ ಸ್ಥಿತಿಗತಿ ಹಾಗೂ ಅವರು ಯಾವ ವೃತ್ತಿಗಳಲ್ಲಿದ್ದಾರೆಂದು ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಯಾದವ್ ಹೇಳಿದ್ದಾರೆ.
ಜಾತಿ ಜನಗಣತಿ ವಿವರಗಳು ಬಹಿರಂಗಪಡಿಸಿದಲ್ಲಿ ವಿವಿಧ ಜಾತಿಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಹಣಕಾಸು ಒದಗಿಸಲು ಸಹಾಯವಾಗುತ್ತದೆ ಎಂದು ಹೇಳಿದ ಯಾದವ್ ''ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿ ಕೆಟ್ಟದ್ದಾಗಿದೆ ಎಂದು ಸಂಚಾರ್ ಆಯೋಗ ವರದಿ ತಿಳಿಸಿದೆ'' ಎಂದು ವಿವರಿಸಿದರು.
''ಮುಸ್ಲಿಂ ಮಕ್ಕಳು ಶಾಲೆಗೆ ಹೋಗುತ್ತಿಲ್ಲ ಯಾ ಶಾಲೆಗೆ ಹೋಗುತ್ತಿದ್ದರೂ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸುತ್ತಾರೆ ಹಾಗೂ ನಿರುದ್ಯೋಗಿಗಳಾಗಿದ್ದಾರೆ ಎಂದು ಆಯೋಗದ ವರದಿ ಹೇಳಿದೆ. ಇಂತಹ ಯುವಕರ ಕಲ್ಯಾಣಕ್ಕೆ ಏನಾದರೂ ಕೊಡುಗೆ ನೀಡುವುದು ಸರಕಾರದ ಕರ್ತವ್ಯವೆಂದು ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.
ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಕೂಡ ಬಿಹಾರ ಚುನಾವಣೆಯ ಮೊದಲು ಜಾತಿ ಜನಗಣತಿ ವಿವರಗಳನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದ್ದರು.







