'ಪಾಕ್ ಕಲಾವಿದರು ಭಯೋತ್ಪಾದಕರಲ್ಲ'
ಮುಂಬೈ, ಸೆ.30: ಪಾಕಿಸ್ತಾನದ ಕಲಾವಿದರನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಬಾರದು. ಕಲೆ ಮತ್ತು ಭಯೋತ್ಪಾದನೆ ..ಇವೆರಡನ್ನು ಥಳಕು ಹಾಕುವುದು ಸರಿಯಲ್ಲ ಎಂದು ಖ್ಯಾತ ಹಿಂದಿ ಚಿತ್ರನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ಉರಿ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಲಾವಿದರಿಗೆ ಹಿಂದಿ ಚಿತ್ರೋದ್ಯಮದಿಂದ ಬಹಿಷ್ಕಾರ ವಿಧಿಸುವ ನಿರ್ಣಯವನ್ನು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ ನಿನ್ನೆ ಅಂಗೀಕರಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಲ್ಮಾನ್‌ಖಾನ್, ಪಾಕಿಸ್ತಾನದ ಕಲಾವಿದರು ಭಯೋತ್ಪಾದಕರಲ್ಲ. ಭಯೋತ್ಪಾದನೆ ಮತ್ತು ಕಲೆ ವಿಭಿನ್ನ ವಿಷಯಗಳು ಎಂದಿದ್ದಾರೆ. ಭಾರತೀಯ ಪಡೆಗಳು ನಡೆಸಿದ 'ಸರ್ಜಿಕಲ್ ದಾಳಿ' ಸೂಕ್ತ ಕ್ರಮ. ಯಾಕೆಂದರೆ ಕ್ರಿಯೆಗೆ ಪ್ರತಿಕ್ರಿಯೆ ನೀಡಲೇಬೇಕು. ಆದರೆ ಸದ್ಯದ ಸ್ಥಿತಿಯಲ್ಲಿ ಜನಸಾಮಾನ್ಯರು ಶಾಂತಿ ಮತ್ತು ಸೌಹಾರ್ದತೆಯಲ್ಲಿ ಬಾಳ್ವೆ ನಡೆಸುವುದನ್ನು ಬಯಸುತ್ತಾರೆ ಎಂದು ಸಲ್ಮಾನ್ ಹೇಳಿದರು.
ತಮ್ಮ ಬೀಯಿಂಗ್ ಹ್ಯೂಮನ್ ಪ್ರತಿಷ್ಠಾನದ ವಜ್ರಾಭರಣಗಳ ಶ್ರೇಣಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.





