ಮೌಢ್ಯಾಚರಣೆ ಕಾಯ್ದೆಜಾರಿಯ ವಿರುದ್ಧ ಬ್ಲ್ಯಾಕ್ ಮೇಲ್ ತಂತ್ರ: ನಿಡುಮಾಮಿಡಿ ಶ್ರೀ

ದಾವಣಗೆರೆ, ಸೆ.30: ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರಬಾರದು ಎನ್ನುವ ನಿಟ್ಟಿನಲ್ಲಿ ಕೆಲವರು ಸರಕಾರದ ಮೇಲೆ ಬ್ಲ್ಯಾಕ್‌ಮೇಲ್ ತಂತ್ರವನ್ನು ರೂಪಿಸುತ್ತ್ತಿದ್ದಾರೆ ಎಂದು ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು. ಶುಕ್ರವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಮೌಢ್ಯಾ ಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಕ್ರಿಯಾ ಸಮಿತಿ ಜಿಲ್ಲಾ ಘಟಕದಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜ್ಯೋತಿಷಿಗಳು ತಮ್ಮ ತಂಟೆಗೆ ಬರದಂತೆ ಕಾಯ್ದೆ ರಚನೆ ಮಾಡುವಂತೆ ಕಾನೂನು ಸಚಿವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಸಚಿವರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ಸಚಿವರು ಅತಂಕಗೊಳ್ಳದೆ ಕಾಯ್ದೆಯ ಜಾರಿಗೆ ಬದ್ಧರಾಗಬೇಕು ಎಂದು ಆಗ್ರಹಿಸಿದರು. ಯಾವುದೇ ಧರ್ಮ ಇರಲಿ ಮೊದಲು ಆತ್ಮಸ್ಥೈರ್ಯ ತುಂಬ ಬೇಕು. ಮನುಷ್ಯರನ್ನು ಮಾನಸಿಕವಾಗಿ ದುರ್ಬಲಗೊಳಿಸಿರುವ ಪಂಚಾಂಗ ದೇಶವನ್ನೇ ದುರ್ಬಲಗೊಳಿಸುವುದು. ಎಲ್ಲರೂ ಪಂಚಾಂಗ ನೋಡದೆ ಜೀವನ ನಡೆಸುವ ಪ್ರತಿಜ್ಞೆ ಮಾಡಬೇಕು. ಮನೆಯ ಟಿವಿಯಲ್ಲಿ ಬರುವ ಜ್ಯೋತಿಷ್ಯವನ್ನು ನೋಡದಂತೆ ಎಚ್ಚರ ವಹಿಸಬೇಕು ಎಂದರು. ದೇವರಿಲ್ಲ ಆದರೆ, ನಮಗೆ ದೇವರು ಬೇಕು. ಸಾಂತ್ವನ, ನೈತಿಕ ವೌಲ್ಯ ಹಾಗೂ ಭರವಸೆಯ ಶಕ್ತಿಯೇ ದೇವರು. ಸಕಾರಾತ್ಮಕ ನೆಲೆಯಲ್ಲಿ ದೇವರನ್ನು ತೆಗೆದುಕೊಳ್ಳಬೇಕು. ಒಳ್ಳೆಯ ನಂಬಿಕೆಗಳ ಸದಾಚರಣೆ ಇರಬೇಕು. ಧರ್ಮದ ಹೆಸರಿನಲ್ಲಿ ದೇವರ ದುರ್ಬಳಕೆ, ಅಪಮಾನ, ಸಾಮಾಜಿಕ, ಆರ್ಥಿಕ ಶೋಷಣೆಗಳ ವಿರುದ್ಧ ಈ ಕಾಯ್ದೆ ತರುವುದು ಅನಿವಾರ್ಯ ಎಂದರು. ಸರಕಾರ ಈ ಕಾಯ್ದೆ ಜಾರಿಗೆ ತಂದರೆ ವೋಟ್ ಬ್ಯಾಂಕಿಗೆ ತೊಂದರೆಯಾಗುತ್ತದೆ ಎನ್ನುವ ಶಂಕೆ ಬೇಡ. ಈ ಕಾಯ್ದೆ ಜಾರಿಗೆ ತಂದರೆ ಹೆಚ್ಚಿನ ಪ್ರಮಾಣದಲ್ಲಿ ವೋಟುಗಳು ಬೀಳಲಿವೆ. ಸರಕಾರ, ವಿಪಕ್ಷಗಳು ಸಹಕಾರ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಇದು ವೇಳೆ ಕಾನೂನು ಜಾರಿಗೆ ತರಲು ಸರಕಾರ ಮೀನಾಮೇಷ ಎಣಿಸಿದರೆ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು. ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಬರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರ ಈ ಕಾಯ್ದೆಯನ್ನು ಜಾರಿಗೆ ತರಬೇಕು. ಈ ಬಗ್ಗೆ ಆಸ್ತಿಕರು ಮತ್ತು ನಾಸ್ತಿಕರು ಕಾಯ್ದೆ ಜಾರಿಗೆ ಬೆಂಬಲಿಸಬೇಕೆಂದು ಹೇಳಿದರು. ಸ್ತಿಕರು ದೇವರು ಮತ್ತು ದೆವ್ವಗಳನ್ನು ಶೋಷಿಸುತ್ತಿದ್ದಾರೆ. ರಾಜಕಾರಣಿಗಳು ಇವುಗಳನ್ನು ಪೋಷಣೆ ಮಾಡುತ್ತಿರುವುದು ದುರ್ದೈವದ ಸಂಗತಿ. ಗಾಂಧೀಜಿ ಕೂಡ ಆಸ್ತಿಕರಾದರೂ ಎಂದೂ ಸ್ವಾತಂತ್ರ್ಯದ ಹೋರಾಟಕ್ಕೆ ಬಳಸಿಕೊಳ್ಳದೆ ಕೇವಲ ಚರಕ, ಖಾದಿ, ಉಪ್ಪನ್ನು ತಮ್ಮ ಹೋರಾಟದ ಅಸ್ತ್ರವನ್ನಾಗಿ ಬಳಸಿಕೊಂಡವರು. ಆಸ್ತಿಕರಾದವರು ತಮ್ಮ ಆತ್ಮಸಾಕ್ಷಿಗಳನ್ನು ಮಹಾತ್ಮರ ನೆಲೆಯೊಳಗೆ ಯೋಚಿಸಿ ಈ ಕಾಯ್ದೆ ಜಾರಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಿಪಿಐ ಮುಖಂಡರಾದ ಕೆ.ನೀಲ, ಎಚ್.ಕೆ. ರಾಮಚಂದ್ರಪ್ಪ, ಎಂ. ಶಿವಕುಮಾರ, ಶಿವನಕರೆ ಬಸವಲಿಂಗಪ್ಪ, ಇಂದಿರಾ ಫ್ರೊ. ಬಿ.ಕೃಷ್ಣಪ್ಪ, ಬಸವರಾಜ್, ಷಣ್ಮುಖಯ್ಯ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.





