ಭಾರತದಲ್ಲಿ ವೃದ್ಧರ ಬವಣೆ ಮುಂದುವರಿಕೆ
ಹೊಸದಿಲ್ಲಿ, ಸೆ.30: ಭಾರತದಲ್ಲಿ ವೃದ್ಧರು ವೈದ್ಯಕೀಯ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುವುದು ಮುಂದುವರಿದಿದೆಯೆಂದು ಹೊಸ ಅಧ್ಯಯನವೊಂದು ತಿಳಿಸಿದೆ.
ದಿಲ್ಲಿ ಮೂಲದ ಏಜ್‌ವೆಲ್ ಫೌಂಡೇಶನ್ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು ಭಾರತದ ಹಿರಿಯ ನಾಗರಿಕರ ಆರ್ಥಿಕ ಸ್ಥಿತಿಗತಿಯನ್ನು ವಿಶ್ಲೇಷಿಸಿದ್ದು, ನಿವ್ವಳ ವೌಲಿಕತೆ, ಆರ್ಥಿಕ ಅಗತ್ಯ ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ವಿವಿಧ ಆಯಾಮಗಳ ಅಂದಾಜು ನಡೆಸಿದೆ.
ಪ್ರತಿಷ್ಠಾನವು ಯಾದೃಚ್ಛಿಕವಾಗಿ 60ರ ಪ್ರಾಯದ ಮೇಲಿನ 15 ಸಾವಿರ ಮಂದಿಯ ಸಂದರ್ಶನ ನಡೆಸಿದೆ. ಕಳೆದ 2 ದಶಕಗಳಿಂದ ರಿಯಲ್ ಎಸ್ಟೇಟ್ ದರ ಏರಿಕೆಯಿಂದಾಗಿ ಸಂದರ್ಶಿಸಲಾದವರಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರ ನಿವ್ವಳ ವೌಲಿಕತೆಯು ಹೆಚ್ಚಾಗಿರುವುದು ಕಂಡುಬಂದಿದೆ.
ತಮ್ಮ ವೃದ್ಧಾಪ್ಯದಲ್ಲಿ ನಿವ್ವಳ ವೌಲಿಕತೆ ಗಣನೀಯವಾಗಿ ಹೆಚ್ಚಾಗಿದೆ. ಆದರೆ, ವೃದ್ಧ ಸಂವೇದಿ ಕಾರ್ಯಕ್ರಮಗಳ ಕೊರತೆಯಿಂದಾಗಿ ತಮ್ಮ ಬವಣೆ ಮುಂದುವರಿದಿದೆಯೆಂದು ಶೇ.46.4ರಷ್ಟು ಹಿರಿಯ ನಾಗರಿಕರು ಪ್ರತಿಪಾದಿಸಿದ್ದಾರೆ.
ಹೆಚ್ಚು ನಿವ್ವಳ ವೌಲಿಕತೆಯೊಂದಿಗೆ, ಸಮೀಕ್ಷೆ ನಡೆಸಲಾದವರು ಹೆಚ್ಚಿನ ಕೊಳ್ಳುವ ಸಾಮರ್ಥ್ಯವನ್ನೂ ಪಡೆದಿದ್ದಾರೆ. ಆದರೆ, ಕುಟುಂಬದ ಕಿರಿಯ ಸದಸ್ಯರು ಆಗಾಗ ಅವರ ನಿರ್ಧಾರಗಳ ದುರುಪಯೋಗ ಮಾಡುವುದರಿಂದ, ಅವರಿಗೆ ತಮ್ಮ ಎಣಿಕೆಯಂತೆ ಅದನ್ನು ಮಾಡಲು ಸಾಧ್ಯವಾಗುವುದಿಲ್ಲವೆಂದೂ ಅಧ್ಯಯನ ಹೇಳಿದೆ.
ದೇಶದ ಆರ್ಥಿಕತೆಯಲ್ಲಿ ಹಿರಿಯ ನಾಗರಿಕರ ಮಹತ್ವದ ಪಾತ್ರ ಹಾಗೂ ಸಕ್ರಿಯ ಭಾಗವಹಿಸುವಿಕೆಯ ಹೊರತಾಗಿಯೂ ಯುವಕರಿಗೆ ಹೋಲಿಸಿದರೆ ಬಳಕೆದಾರರಾಗಿ ಅವರೀಗಲೂ ನಿರ್ಲಕ್ಷಿಸಲ್ಪಡುತ್ತಿದ್ದಾರೆ. ವೃದ್ಧರಿಗಾಗಿ ಸರಕಾರಿ ಕಾರ್ಯಕ್ರಮಗಳ ಕೊರತೆಯಿರುವುದರಿಂದ ಅವರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತೊಂದರೆಗೊಳಗಾಗುವುದು ಮುಂದುವರಿದಿದೆ. ಸಮೀಕ್ಷಿಸಲಾದ ಅರ್ಧಕ್ಕೂ ಹೆಚ್ಚು ವೃದ್ಧರು ಆರ್ಥಿಕ ಸಮಸ್ಯೆಯಲ್ಲಿದ್ದರೆ, ಮೂರನೆ ಎರಡರಷ್ಟು ಮಂದಿ ತಮ್ಮ ದಿನವಹಿ ವೆಚ್ಚಕ್ಕಾಗಿ ಬೇರೆಯವರನ್ನು ಅವಲಂಬಿಸಿದ್ದಾರೆಂದು ಅಧ್ಯಯನ ತಿಳಿಸಿದೆ.







