‘ಸುಪ್ರೀಂ’ ತೀರ್ಪು ಅನ್ಯಾಯದ ಪರಮಾವಧಿ: ಬಿ.ವಿ.ಆಚಾರ್ಯ

ಬೆಂಗಳೂರು, ಸೆ.30: ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವಂತಹ ತೀರ್ಪು ಅನ್ಯಾಯದ ಪರಮಾವಧಿ ಎಂದು ನಿವೃತ್ತ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠಕ್ಕೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶ ನೀಡುವ ಅಧಿಕಾರವಿಲ್ಲ ಎಂದರು. ಾವೇರಿ ನ್ಯಾಯಾಧಿಕರಣ ನೀಡಿರುವ ಈ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ನಡೆಸಲಿದೆ. ತ್ರಿಸದಸ್ಯ ಪೀಠದ ಎದುರು ಇರುವ ಅರ್ಜಿ ಇತ್ಯರ್ಥವಾಗುವ ಮುಂಚೆ ವಿಭಾಗೀಯ ಪೀಠವು ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ನೀಡಿರುವ ಆದೇಶವು ಸಂವಿಧಾನ ಬಾಹಿರವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರಕಾರವು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠಕ್ಕೆ ಈ ವಿಚಾರವನ್ನು ಮನವರಿಕೆ ಮಾಡಿಕೊಡಬೇಕಿತ್ತು. ಅಲ್ಲದೆ, ಕೇಂದ್ರ ಸರಕಾರವು, ದ್ವಿಸದಸ್ಯ ಪೀಠದ ವ್ಯಾಪ್ತಿಯನ್ನು ನೆನಪಿಸಬೇಕಿತ್ತು ಎಂದು ಬಿ.ವಿ.ಆಚಾರ್ಯ ತಿಳಿಸಿದರು.ಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸೆ.20ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರಕಾರ ಅರ್ಜಿ ಸಲ್ಲಿಸಬೇಕಿತ್ತು. ಅಂತಹ ಅರ್ಜಿ ಸಲ್ಲಿಸದಿದ್ದರೆ, ದೊಡ್ಡ ಪ್ರಮಾದವಾಗಲಿದೆ. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಅರ್ಜಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಮಾಡಿರುವ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲವೆಂದು ರಾಜ್ಯ ಸರಕಾರ ಸುಮ್ಮನೆ ಕುಳಿತುಕೊಳ್ಳಬೇಕು. ನ್ಯಾಯಾಲಯ ಏನೇ ಕ್ರಮ ಜರಗಿಸಿದರೂ ಅದನ್ನು ಎದುರಿಸಲು ಸಿದ್ಧವಾಗಬೇಕು ಎಂದು ಆಚಾರ್ಯ ಸಲಹೆ ನೀಡಿದರು.





