ದಾವೂದ್, ಛೋಟಾ ಶಕೀಲ್ ವಿರುದ್ಧ ಜಾಮೀನುರಹಿತ ವಾರಂಟ್
ಹೊಸದಿಲ್ಲಿ, ಸೆ.30:ಬಲಪಂಥೀಯ ಸಂಘಟನೆಯ ನಾಯಕರೋರ್ವರ ಹತ್ಯೆಗೆ ಬಾಡಿಗೆ ಗೂಂಡಾಗಳಿಗೆ ಸುಪಾರಿ ನೀಡಿದ ಆರೋಪದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರ ಛೋಟಾ ಶಕೀಲ್ ವಿರುದ್ಧ ದಿಲ್ಲಿ ಕೋರ್ಟ್ ಬಹಿರಂಗ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಅಖಿಲ ಭಾರತೀಯ ಹಿಂದೂ ಮಹಾಸಭಾದ ಮುಖಂಡ ಸ್ವಾಮಿ ಚಕ್ರಪಾಣಿಯವರನ್ನು ಹತ್ಯೆ ಮಾಡಲು ಒಳಸಂಚು ಹೂಡಿದ್ದ ಕಾರಣಕ್ಕೆ ದಾವೂದ್ ಮತ್ತು ಶಕೀಲ್ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಬೇಕೆಂದು ದಿಲ್ಲಿ ಪೊಲೀಸರ ವಿಶೇಷ ವಿಭಾಗ ಕೋರಿತ್ತು. ಇದರಂತೆ ಚೀಫ್ ಮೆಟ್ರೊಪೊಲಿಯನ್ ಮ್ಯಾಜಿಸ್ಟ್ರೇಟ್ ಸುಮಿತ್ ದಾಸ್ ಆದೇಶ ಹೊರಡಿಸಿದ್ದಾರೆ. ದಾವೂದ್‌ಗೆ ಸೇರಿದ್ದ ಕಾರೊಂದನ್ನು ಕಳೆದ ವರ್ಷ ಮುಂಬೈ ಸರಕಾರ ಹರಾಜು ಹಾಕಿತ್ತು. ಇದರಲ್ಲಿ ಕಾರನ್ನು ಪಡೆದ ಚಕ್ರಪಾಣಿ ಬಳಿಕ ಈ ಕಾರನ್ನು ಬೆಂಕಿಇಟ್ಟು ಸುಟ್ಟು ಹಾಕಿದ್ದರು. ಈ ವರ್ಷದ ಜೂನ್‌ನಲ್ಲಿ ಚಕ್ರಪಾಣಿಯವರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದ ಆರೋಪದ ಮೇಲೆ ಪೊಲೀಸರು ಜುನೈದ್, ರೋಜರ್, ಯೂನುಸ್ ಮತ್ತು ಮನೀಷ್ ಎಂಬವರನ್ನು ಬಂಧಿಸಿದ್ದರು. ಇವರ ಬಳಿಯಿದ್ದ ಎರಡು ಪಿಸ್ತೂಲ್, 10 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ದಾವೂದ್‌ಗೆ ಸೇರಿದ್ದ ಕಾರನ್ನು ಸುಟ್ಟು ಹಾಕುವ 'ಸಾಹಸ' ಮಾಡಿದ್ದಕ್ಕಾಗಿ ಚಕ್ರಪಾಣಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ್ದ ಶಕೀಲ್, ಕೊಲೆಗೆ ಸುಪಾರಿ ನೀಡಿದ್ದ ಎಂದು ವಿಚಾರಣೆ ವೇಳೆ ಇವರು ಬಾಯ್ಬಿಟ್ಟಿದ್ದರು.





