ಟೂತ್ ಪೇಸ್ಟ್ ಎಂದು ಇಲಿ ಪಾಷಾಣ ಬಳಕೆ: ವಿವಾಹಿತ ಮಹಿಳೆ ಮೃತ್ಯು
ಪುತ್ತೂರು, ಸೆ.30: ಟೂತ್‌ಪೇಸ್ಟ್ ಎಂದು ಭಾವಿಸಿ ಇಲಿಪಾಷಣವನ್ನು ಹಲ್ಲು ಉಜ್ಜಲು ಬಳಸಿ ಅಸ್ವಸ್ಥಗೊಂಡ ಗೃಹಿಣಿಯೊಬ್ಬರು ಮೃತಪಟ್ಟ ಘಟನೆ ಸವಣೂರು ಸಮೀಪದ ಕನ್ನಡಕುಮೇರು ಎಂಬಲ್ಲಿ ಗುರುವಾರ ಸಂಭವಿಸಿದೆ.
ಉಡುಪಿ ಮಣಿಪುರ ಗ್ರಾಮದ ಮೂಡುಬೆಟ್ಟ ರಾಜೇಶ್ ಎಂಬವರ ಪತ್ನಿ ಕವಿತಾ(24)ಮೃತಪಟ್ಟವರು. ಇವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕವಿತಾ ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಮಾಡಿಸಿದ್ದರು. ಕಳೆದ ಒಂದು ವಾರದ ಹಿಂದೆ ಸವಣೂರು ಕನ್ನಡಕುಮೇರಿನಲ್ಲಿರುವ ತವರಿಗೆ ಬಂದಿದ್ದ ಕವಿತಾ ಸೆ.24ರಂದು ಬೆಳಗ್ಗೆ ಎಂದಿನಂತೆ ಹಲ್ಲು ಉಜ್ಜಲು ಟೂತ್‌ಪೇಸ್ಟ್ ಎಂದು ಭಾವಿಸಿ ಇಲಿಪಾಷಾಣವನ್ನು ಬಳಸಿದ್ದಾರೆ. ಇದರಿಂದ ವಿಷ ಪದಾರ್ಥ ಅವರ ಹೊಟ್ಟೆ ಸೇರಿ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಿಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಕವಿತಾರ ತಂದೆ ಮುತ್ತಪ್ಪಗೌಡ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





