ಉತ್ತರ ಪ್ರದೇಶ, ಬಿಹಾರ: ಭಾರತದ ಯುವ ರಾಜ್ಯಗಳು!
ದೇಶದ ಅತ್ಯಂತ ಯುವ ರಾಜ್ಯಗಳು ಯಾವುದು ಗೊತ್ತೇ? ಅಂದರೆ ಅತಿಹೆಚ್ಚು ಯುವ ಸಮುದಾಯ ಇರುವ ರಾಜ್ಯಗಳು ಯಾವುವು? ಉತ್ತರ ಪ್ರದೇಶ ಮತ್ತು ಬಿಹಾರ. ತದ್ವಿರುದ್ಧವಾಗಿ ಕೇರಳ ಹಾಗೂ ತಮಿಳುನಾಡು ಅತಿ ಹೆಚ್ಚು ವೃದ್ಧರಾಜ್ಯಗಳು. 2011ರ ಅಂಕಿ ಅಂಶಗಳ ವಿಶ್ಲೇಷಣೆಯಿಂದ ಈ ಅಂಶ ತಿಳಿದುಬಂದಿದೆ. ಬೆಂಗಳೂರು ಮೂಲದ ತಕ್ಷಶಿಲಾ ಸಂಸ್ಥೆ ಈ ವಿಶ್ಲೇಷಣೆ ನಡೆಸಿದೆ.
ಮಧ್ಯಾಂತರ ವಯಸ್ಸು ಎಂದರೆ ಇಡೀ ಜನಸಂಖ್ಯೆಯನ್ನು ಎರಡು ಸಮ ಅರ್ಧಗಳಾಗಿ ವಿಂಗಡಿಸುವುದು. ಅಂದರೆ ಮಧ್ಯಾಂತರ ವಯಸ್ಸಿಗಿಂತ ಮೇಲ್ಪಟ್ಟವರು ವೃದ್ಧರು ಹಾಗೂ ಅದಕ್ಕಿಂತ ಕೆಳಗಿನವರು ಯುವಕರು. ಮಧ್ಯಾಂತರ ವಯಸ್ಸು ಕಡಿಮೆ ಇದೆ. ಕಡಿಮೆ ಸರಾಸರಿ ವಯಸ್ಸು ಇರುವ ರಾಜ್ಯ ಯುವ ರಾಜ್ಯ ಎನಿಸಿಕೊಂಡರೆ, ಅಧಿಕ ಸರಾಸರಿ ಇರುವ ರಾಜ್ಯಗಳನ್ನು ವೃದ್ಧ ರಾಜ್ಯಗಳು ಎಂದು ಪರಿಗಣಿಸಲಾಗುತ್ತದೆ.
ದೇಶದಲ್ಲಿ 2001ರಲ್ಲಿ 22.51 ಇದ್ದ ಸರಾಸರಿ ವಯಸ್ಸು, 2011ರಲ್ಲಿ 24 ವರ್ಷಕ್ಕೆ ಏರಿಕೆಯಾಗಿದೆ ಎಂದು 2011ರ ಜನಗಣತಿ ಅಂಕಿ ಅಂಶ ಹೇಳುತ್ತದೆ. 2050ರ ವೇಳೆಗೆ ದೇಶದ ಸರಾಸರಿ ವಯಸ್ಸು 37 ವರ್ಷಕ್ಕೆ ತಲುಪಲಿದೆ. ಇದು ಚೀನಾಗಿಂತ ಕಡಿಮೆ. ಚೀನಾ ಜನರ ಸರಾಸರಿ ವಯಸ್ಸು ಆ ವೇಳೆಗೆ 46 ವರ್ಷ ಆಗಲಿದೆ. ಆದರೆ ಪಾಕಿಸ್ತಾನದ ಸರಾಸರಿ ವಯಸ್ಸಿಗಿಂತ ಅಧಿಕ. ಪಾಕಿಸ್ತಾನದಲ್ಲಿ 2050ರ ವೇಳೆಗೆ ಜನರ ಸರಾಸರಿ ವಯಸ್ಸು 30.9 ಇರಲಿದೆ.
ಆದರೆ ಭಾರತದಲ್ಲಿ ಕೂಡಾ ವೈವಿಧ್ಯಮಯ ಚಿತ್ರಣ ಇದೆ. ಕೇರಳದಲ್ಲಿ ಸರಾಸರಿ ವಯಸ್ಸು, ಅರ್ಜೆಂಟೀನಾ ದೇಶದ ಸರಾಸರಿ (30.8)ಕ್ಕೆ ಸನಿಹದಲ್ಲಿದ್ದರೆ, ಉತ್ತರ ಪ್ರದೇಶದ ಸರಾಸರಿ ವಯಸ್ಸು 20 ವರ್ಷವಾಗಿದ್ದು, ಇದು ಕೀನ್ಯಾದ ಸರಾಸರಿ ವಯಸ್ಸಿಗೆ (18.9) ಸಮ.
ಭಾರತದಲ್ಲಿ ಈ ಸರಾಸರಿ ವಯಸ್ಸು ಆಯಾ ಪ್ರದೇಶದ ಅಭಿವೃದ್ಧಿಯ ಮಟ್ಟಕ್ಕೆ ಅನುಗುಣವಾಗಿದೆ. ಅಧಿಕ ತಲಾದಾಯ ಹೊಂದಿರುವ ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶ (27), ತಮಿಳುನಾಡು (29), ಕರ್ನಾಟಕ (26) ಹಾಗೂ ಕೇರಳ (31)ದ ಸರಾಸರಿ ವಯಸ್ಸು ಅಧಿಕ. ಇದರ ಜತೆಗೆ ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರ (26) ಹಾಗೂ ಗುಜರಾತ್ (25) ಅಧಿಕ ಸರಾಸರಿ ವಯಸ್ಸಿನ ವ್ಯಕ್ತಿಗಳನ್ನು ಹೊಂದಿವೆ.
ಕಡಿಮೆ ಅಭಿವೃದ್ಧಿ ಹೊಂದಿದ ಉತ್ತರ ರಾಜ್ಯಗಳಾದ ಉತ್ತರ ಪ್ರದೇಶ (20), ಬಿಹಾರ (20), ಜಾರ್ಖಂಡ್ (22), ಮಧ್ಯಪ್ರದೇಶ (23) ಹಾಗೂ ರಾಜಸ್ಥಾನ (22) ಕಡಿಮೆ ಸರಾಸರಿ ವಯಸ್ಸು ಹೊಂದಿವೆ.
2026ರ ವೇಳೆಗೆ ಉತ್ತರ ಪ್ರದೇಶ (26.85), ಮಧ್ಯಪ್ರದೇಶ (28.83), ಬಿಹಾರ (29.5) ಹಾಗೂ ರಾಜಸ್ಥಾನ (29.51) ಕಡಿಮೆ ಪ್ರಮಾಣದ ಸರಾಸರಿ ವಯಸ್ಸನ್ನೇ ಹೊಂದಲಿವೆ. ಆದರೆ ಕೇರಳ (37.67) ಹಾಗೂ ತಮಿಳುನಾಡು (37.29) ಗರಿಷ್ಠ ಸರಾಸರಿ ವಯಸ್ಸನ್ನು ಹೊಂದಿದ ರಾಜ್ಯಗಳಾಗಲಿವೆ.
ಮುಂದಿನ ಶತಮಾನದ ವೇಳೆಗೆ ಭಾರತದಲ್ಲಿ ಹೆಚ್ಚಾಗುವ ಒಟ್ಟು ಜನಸಂಖ್ಯೆಯ ಪೈಕಿ ಶೇ. 60ರಷ್ಟು ಜನಸಂಖ್ಯೆ ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಿಂದ ಬರಲಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸೇರಿ ಶೇ. 22ರಷ್ಟು ಮಾತ್ರ ಜನಸಂಖ್ಯೆ ಹೆಚ್ಚಲಿದೆ ಎಂದು ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ 2003ರ ಅಂದಾಜು ಹೇಳಿದೆ.
ಈ ಯುವ ಜನಸಂಖ್ಯೆ ದೇಶದ ಶ್ರಮಿಕ ವರ್ಗವಾಗಿ ರೂಪುಗೊಳ್ಳಲಿದೆ. ಈ ಮೂಲಕ ಯುವ ಜನಸಂಖ್ಯೆಯನ್ನು ಕಡಿಮೆ ಹೊಂದಿರುವ ಇತರ ದೇಶಗಳಿಗಿಂತ ಲಾಭದಾಯಕ ಸ್ಥಾನಕ್ಕೆ ಭಾರತ ಬರಲಿದೆ. ಆದರೆ ಜನರ ಉತ್ಪಾದಕತೆ ಮಾತ್ರ, ಆ ರಾಜ್ಯದ ಒಟ್ಟು ಜನಸಂಖ್ಯೆಯ ಒಟ್ಟು ಮೊತ್ತ, ಸುಧಾರಿತ ಆರೋಗ್ಯ ಸೇವೆ ಹಾಗೂ ಶಿಕ್ಷಣ ಮಟ್ಟವನ್ನು ಅವಲಂಬಿಸಿರುತ್ತದೆ. ಜತೆಗೆ ಉದ್ಯೋಗಾವಕಾಶವನ್ನು ಒದಗಿಸುವುದು ಕೂಡಾ ಪ್ರಮುಖವಾಗುತ್ತದೆ ಎಂದು ಏಷ್ಯಾ ಹಾಗೂ ಫೆಸಿಫಿಕ್ ನೀತಿಗಳ ಅಧ್ಯಯನ ಕುರಿತ 2013ರ ವರದಿ ವಿವರಿಸುತ್ತದೆ.
2011ರಲ್ಲಿ ಬಿಹಾರದ ಸಾಕ್ಷರತೆ ಪ್ರಮಾಣ ಶೇ. 63.82 ಇದ್ದು, ಇದು ತಮಿಳುನಾಡಿಗೆ ಹೋಲಿಸಿದರೆ ತೀರಾ ಕಡಿಮೆ. ತಮಿಳುನಾಡಿನಲ್ಲಿ ಶೇ. 80.33ರಷ್ಟು ಸಾಕ್ಷರತೆ ಇದೆ.
ಬಿಹಾರದಲ್ಲಿ ಶಿಶು ಮರಣ ಪ್ರಮಾಣ ಕೂಡಾ ಅತ್ಯಧಿಕ. ಅಂದರೆ ಜನ್ಮ ನೀಡುವ ಪ್ರತಿ 1000 ಮಂದಿಯ ಪೈಕಿ ಸಾಯುವ ಮಕ್ಕಳ ಸಂಖ್ಯೆ. ಬಿಹಾರದಲ್ಲಿ ಪ್ರತಿ 1000 ಹುಟ್ಟಿನಲ್ಲಿ 44 ಶಿಶುಗಳು ಸಾಯುತ್ತವೆ. ಆದರೆ ತಮಿಳುನಾಡಿನಲ್ಲಿ ಈ ಪ್ರಮಾಣ ಕೇವಲ 22.
indiaspend.com





