ಹೆಸರಿಗಷ್ಟೇ ಗ್ರಂಥಾಲಯಗಳು!
ಮಾನ್ಯರೇ
ರಾಜ್ಯಾದ್ಯಂತ ಹೆಚ್ಚಿನ ಗ್ರಾಮೀಣ ಗ್ರಂಥಾಲಯ ವ್ಯವಸ್ಥೆ ಶಿಥಿಲಗೊಂಡಿವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮೀಣ ಜನತೆಗೆ ಓದುವ ಹವ್ಯಾಸ ಮೂಡಿಸುವ ಉದ್ದೇಶದಿಂದ ಗ್ರಂಥಾಲಯಗಳು ಜವಾಬ್ದಾರಿಯುತ ಸ್ಥಾನ ಪಡೆಯುತ್ತವೆ. ಆದರೆ ಸರಕಾರ ಇಂತಹ ಹೆಚ್ಚಿನ ಗ್ರಂಥಾಲಯಗಳಿಗೆ ಮೂಲಸೌಕರ್ಯವನ್ನೇ ಕಲ್ಪಿಸದಿರುವುದರಿಂದ ಅವು ಮೂಲೆಗುಂಪಾಗಿವೆ. ಕೆಲವು ಹಳ್ಳಿಗಳಲ್ಲಿ ಗ್ರಂಥಾಲಯಗಳು ಹೆಸರಿಗಷ್ಟೇ ಇರುತ್ತವೆ.
ಗ್ರಂಥಾಲಯಗಳಲ್ಲಿ ಗ್ರಂಥಪಾಲಕರ ಕೊರತೆ ಅಥವಾ ಅವರಿಗೆ ಸರಿಯಾಗಿ ವೇತನ ಸಿಗದಿರುವ ಸಮಸ್ಯೆ ಒಂದೆಡೆಯಾದರೆ ಇನ್ನು ಕೆಲವು ಕಡೆ ಗ್ರಂಥಾಲಯಗಳು ಗ್ರಂಥಪಾಲಕರ ಮನೆಯಾಗಿದೆ.
ಗ್ರಂಥಾಲಯಗಳು ನಗರಗಳಲ್ಲಷ್ಟೇ ಪ್ರಾಮುಖ್ಯತೆ ಪಡೆಯಬಾರದು, ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಹಳ್ಳಿಗಳ ಗ್ರಂಥಾಲಯಗಳಿಗೂ ಪ್ರಾಮುಖ್ಯತೆ ಕೊಡಬೇಕಾಗಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಹಳ್ಳಿಯಲ್ಲಿ ನಿರ್ಜೀವ ಸ್ಥಿತಿಯಲ್ಲಿರುವ ಗ್ರಂಥಾಲಯಗಳಿಗೆ ಮೂಲಸೌಕರ್ಯ ಕಲ್ಪಿಸಿ, ಗ್ರಾಮೀಣ ಜನರ ಓದುವ ಹವ್ಯಾಸಕ್ಕೆ ನೆರವಾಗಬೇಕಾಗಿದೆ.
-ಪವನ್ ಕುಮಾರ್ ಕೆ. ಎಲ್.,
ಬೆಂಗಳೂರು





