ಯಾರದೋ ಇಷ್ಟ ಇನ್ಯಾರಿಗೋ ಕಷ್ಟವಾಗಬಾರದಲ್ಲವೇ?
ಮಾನ್ಯರೆ,
ನಾನು ಸಾಮಾನ್ಯವಾಗಿ ಯಾರದೇ ನಂಬಿಕೆಗಳ ಬಗ್ಗೆ ವೈಯಕ್ತಿಕವಾಗಿ ಹೀಯಾಳಿಸುವುದಾಗಲೀ, ಅವಮಾನಿಸುವುದಾಗಲೀ ಮಾಡುವುದಿಲ್ಲ. ಒಂದು ನಂಬಿಕೆಯನ್ನು ಹೇರುವ ಪ್ರಯತ್ನಕ್ಕೆ, ಅದು ಸಾರ್ವಜನಿಕ ಬದುಕಿಗೆ ಅನ್ಯಾಯ ಮಾಡುತ್ತಿದೆ ಅನ್ನಿಸಿದಾಗೆಲ್ಲ ಸದಾ ವಿರೋಧಿಸುತ್ತಲೇ ಬಂದಿದ್ದೇನೆ. ಈ ಮಾತನ್ನು ಯಾಕೆ ಹೇಳಿದೆ ಗೊತ್ತಾ? ಮೊನ್ನೆ ಬೆಳಗ್ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಸ್ಪೀಕರ್ ಆನ್ ಮಾಡಿಕೊಂಡು ಅದ್ಯಾವುದೋ ಮಂತ್ರಗಳನ್ನು ಕೇಳುತ್ತಿದ್ದ. ಅದೆಷ್ಟು ವಾಲ್ಯೂಮ್ ಏರಿಸಿಕೊಂಡಿದ್ದನೆಂದರೆ ಇಡೀ ಬಸ್ಸಿಗಲ್ಲದೇ ಪಕ್ಕದ ವಾಹನಗಳಲ್ಲಿರುವವರಿಗೂ ಕೇಳುತ್ತಿತ್ತು. ಆತ ಮಂತ್ರಗಳನ್ನು ಕೇಳುವುದು ಈಗ ನಿಲ್ಲಿಸಬಹುದು ಆಗ ನಿಲ್ಲಿಸಬಹುದು ಎಂದು ಕಾಯುತ್ತಿದ್ದ ನನಗೆ ಹದಿನೈದು ನಿಮಿಷಗಳಾದರೂ ಈ ಗದ್ದಲದಿಂದ ಮುಕ್ತಿ ಸಿಗಲಿಲ್ಲ. ಕಂಡಕ್ಟರ್ ಆಗಲೀ ಇತರ ಪ್ರಯಾಣಿಕರಾಗಲೀ ಆತ ನೀಡುತ್ತಿದ್ದ ಶಿಕ್ಷೆ ತಡೆಯುವ ಗೋಜಿಗೆ ಹೋಗಲಿಲ್ಲ. ಆ ಹಿಂಸೆ ತಡೆಯಲಾಗದೇ ಆತನಿಗೆ, ಹೆಡ್ ಫೋನ್ ಹಾಕಿಕೊಳ್ಳಿ ಎಂದೆ. ಆತ ಹೆಡ್ ಫೋನ್ ಇಲ್ಲ. ನಿಮಗೆ ಬೇಡವೇ? ಎಂದ. ನನಗೆ ಬೇಕೋ ಬೇಡವೋ ಅನ್ನುವುದು ಮುಖ್ಯವಲ್ಲ. ನಿಮಗೆ ಬೇಕಾದರೆ ಹೆಡ್ ಫೋನ್ ಹಾಕಿಕೊಂಡು ಕೇಳಿ. ಇತರರಿಗೆ ತೊಂದರೆ ಕೊಡಬೇಡಿ ಎಂದೆ. ಆತ ವಾಲ್ಯೂಮ್ ತಗ್ಗಿಸಿದ. ನಾನು ಸುಮ್ಮನಾದೆ. ಬಿಎಂಟಿಸಿ ಬಸ್‌ನಲ್ಲಿ ನನಗೆ ಇಂಥ ಅನುಭವವಾಗಿರುವುದು ಇದೇ ಮೊದಲೇನಲ್ಲ. ಒಬ್ಬ ಅದ್ಯಾವುದೋ ಡಬ್ಬಾ ಚಿತ್ರಗೀತೆ ಹಾಕಿಕೊಂಡು ಕಿರಿಕಿರಿ ಮಾಡುತ್ತಿದ್ದರೆ ಏಕ ಕಾಲದಲ್ಲೇ ಇನ್ನೊಬ್ಬ ಕವಾಲಿ, ಮಗದೊಬ್ಬ ಕರ್ಕಶವಾದ ಎಂಥವರಿಗೂ ಹಿಂಸೆ ನೀಡುವುದಕ್ಕೆ ಸೂಕ್ತವಾದ ತಮಿಳು ಹಾಡು ಕೇಳಿಕೊಂಡು ಒಂದು ಗಂಟೆಯ ಪ್ರಯಾಣದ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತಾರೆ. ನನಗೆ ಬೇಕಾದ ಹಾಡು ಇಂಪಾಗಿರಲಿ, ಕರ್ಣಕಠೋರವಾಗಿರಲಿ ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಹೆಡ್ ಫೋನ್ ಹಾಕಿಕೊಂಡು ಕೇಳುವುದು ನಾಗರಿಕ ಲಕ್ಷಣ. ಕೆಲವರು ಅರ್ಥ ಮಾಡಿಕೊಂಡು ಸಾರಿ ಎಂದು ಸ್ಪೀಕರ್ ಆಫ್ ಮಾಡಿಬಿಡುತ್ತಾರೆ. ಇನ್ನು ಕೆಲವರು, ‘‘ಇರ್ಲೀ ಬಿಡಿ. ಹಾಡು ಚೆನ್ನಾಗಿದೆ’’ ಎಂದು ಮೊಬೈಲ್ ಗದ್ದಲ ಉಂಟುಮಾಡುವ ವ್ಯಕ್ತಿಯ ಬೆಂಬಲಕ್ಕೆ ನಿಲ್ಲುತ್ತಾರೆ. ಯಾರದೋ ಇಷ್ಟ ಇನ್ಯಾರಿಗೋ ಕಷ್ಟವಾಗಬಹುದು ಎಂಬ ತಿಳುವಳಿಕೆಯಾದರೂ ಬೇಡವೇ? ಇನ್ನು ಮುಂದಾದರೂ ಬಸ್‌ಗಳಲ್ಲಿ ಹಾಡು ಕೇಳಬೇಕಾದರೆ ಹೆಡ್ ಫೋನ್ ಬಳಕೆ ಕಡ್ಡಾಯಗೊಳಿಸುವುದು ಒಳಿತು. ಇನ್ನು ಕೆಲವರು ಅಕ್ಕಪಕ್ಕದಲ್ಲಿ ಯಾರಿದ್ದರೇನು ಎಂಬಂತೆ ಕಿರಿಚುತ್ತಾರೆ. ಅವರ ಧ್ವನಿ ಎಷ್ಟು ಜೋರಾಗಿರುತ್ತದೆ ಎಂದರೆ ಫೋನ್ ಅಗತ್ಯವಿಲ್ಲದೇ ತಮಗೆ ಬೇಕಾದವರು ಎಷ್ಟು ದೂರದಲ್ಲಿದ್ದರೂ ಕೇಳುವಂತೆ ಕಿರಿಚುತ್ತಾರೆ. ಮೊಬೈಲ್ ಬಂದ ಮೇಲಂತೂ ಎಗ್ಗಿಲ್ಲದೇ ಸುಳ್ಳು ಹೇಳುವವರು ಸದಾ ಕಾಣ ಸಿಗುತ್ತಿದ್ದಾರೆ. ಅವರ ನಿರ್ಲಜ್ಜ ಧೈರ್ಯ ನೋಡಿ ನಾನು ಅಚ್ಚರಿಗೊಳ್ಳುತ್ತೇನೆ.
-ಟಿ. ಕೆ. ತ್ಯಾಗರಾಜ್,
ಬೆಂಗಳೂರು





