ದೇಶದ ವಿಷಯದಲ್ಲಿ ಹೆಗಲಿಗೆ ಹೆಗಲು ನೀಡುತ್ತೇವೆ: ಇಸ್ಲಾಮಿಕ್ ಧಾರ್ಮಿಕ ಸಂಸ್ಥೆಗಳು
ಉಗ್ರರ ಮೇಲೆ ದಾಳಿ: ಸೇನೆಗೆ ಅಭಿನಂದನೆ

ಮೀರಠ್/ ಬರೇಲಿ, ಅ.1: ಭಾರತ- ಪಾಕ್ ಗಡಿ ನಿಯಂತ್ರಣ ರೇಖೆ ಮೀರಿ ಪಾಕ್ ಆಕ್ರಮಿತ ಪ್ರದೇಶದ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಕ್ರಮವನ್ನು ಇಸ್ಲಾಮಿಕ್ ಧಾರ್ಮಿಕ ಸಂಸ್ಥೆಗಳು ಸ್ವಾಗತಿಸಿವೆ. ದೇಶದ ವಿಷಯದಲ್ಲಿ ಹೆಗಲಿಗೆ ಹೆಗಲು ನೀಡುತ್ತೇವೆ ಎಂದು ಘೋಷಿಸಿವೆ.
ದಾರುಲ್ ಉಲೂಮ್ ದೇವಬಂದ್ ವಕ್ತಾರ ಅಶ್ರಫ್ ಉಸ್ಮಾನಿ ಈ ಬಗ್ಗೆ ಹೇಳಿಕೆ ನೀಡಿ, "ದೇಶದ ಹಿತಾಸಕ್ತಿಯ ವಿಚಾರ ಬಂದಾಗ ನಾವೆಲ್ಲ ಸರಕಾರದ ಹೆಗಲಿಗೆ ಹೆಗಲು ಕೊಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಅದಾಗ್ಯೂ ಸೆಮಿನರಿಯ ಮೊಹ್ಮತೀಮ್ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕೆಲ ದಿನಗಳಿಂದ ಗ್ರಾಮೀಣ ಪ್ರದೇಶಗಳ ಪ್ರವಾಸದಲ್ಲಿದ್ದ ಕಾರಣ, ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಹೇಳಿದ್ದಾರೆ.
ಉಸ್ಮಾನಿ ಸೇನಾ ಕ್ರಮವನ್ನು ಸ್ವಾಗತಿಸಿದ್ದು ಮಾತ್ರವಲ್ಲದೇ, ಭವಿಷ್ಯದಲ್ಲೂ ಇಂಥ ಕ್ರಮಕ್ಕೆ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬರೇಲಿ ಸೆಮಿನರಿಗಳು ಕೂಡಾ ಇಂಥದ್ದೇ ಭಾವನೆ ವ್ಯಕ್ತಪಡಿಸಿದ್ದಾರೆ. "ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನ ಹೊಣೆ. ಈ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯನ್ನು ಮುಸ್ಲಿಂ ಸಮುದಾಯ ಬೆಂಬಲಿಸುತ್ತದೆ" ಎಂದು ಆಲ್ ಇಂಡಿಯಾ ಜಮಾತ್ ರಝಾ ಎ ಮುಸ್ತಾಫಾ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಸಹಬುದ್ದೀನ್ ರಝ್ವಿ ಹೇಳಿದ್ದಾರೆ. ಬರೇಲಿ ನಗರದ ಖಾಝಿ ಮೌಲಾನ ಅಸ್ಜದ್ ರಝಾ ಖಾನ್ ಕೂಡಾ ಇದಕ್ಕೆ ದನಿಗೂಡಿದ್ದಾರೆ.







