ಮತ್ತೆ ಅವಳಿ ಮಕ್ಕಳ ತಂದೆಯಾದ ಖ್ಯಾತ ನಟ ಅಜು ವರ್ಗೀಸ್

ಮುಂಬೈ, ಅ.1: ಖ್ಯಾತ ಮಲಯಾಳಂ ಚಿತ್ರನಟ ಅಜು ವರ್ಗೀಸ್ ಅವರ ಪತ್ನಿ ಆಗಸ್ಟಿನಾ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡೂ ಗಂಡು ಶಿಶುಗಳು ಸೆಪ್ಟೆಂಬರ್ 30 ರಂದು ಜನಿಸಿವೆ. ತಾಯಿ, ಮಗು ಆರೋಗ್ಯದಿಂದಿದ್ದಾರೆಂದು ತಿಳಿದು ಬಂದಿದೆ.
ಅಜು ಅವರು ಫೆಬ್ರವರಿ 2014ರಲ್ಲಿ ಫ್ಯಾಶನ್ ಡಿಸೈನರ್ ಆಗಿರುವ ಆಗಸ್ಟಿನಾ ಅವರನ್ನು ವಿವಾಹವಾಗಿದ್ದರು. ದಂಪತಿಗಳಿಗೆ ಅಕ್ಟೋಬರ್ 2014 ರಲ್ಲಿ ಅವಳಿ ಮಕ್ಕಳು - ಒಂದು ಗಂಡು ಹಾಗೂ ಒಂದು ಹೆಣ್ಣು ಹುಟ್ಟಿದ್ದವು. ಅವರಿಗೆ ಇವಾನ್ ಹಾಗೂ ಜುವಾನ ಎಂಬ ಹೆಸರಿಡಲಾಗಿತ್ತು.
ಇದೀಗ ಹುಟ್ಟಿದ ಅವಳಿ ಮಕ್ಕಳಿಗೆ ಜೇಕ್ ಹಾಗೂ ಲೂಕ್ ಎಂಬ ಹೆಸರಿಡಲಾಗಿದೆ. ತಾನು ಮತ್ತೆ ಅವಳಿ ಮಕ್ಕಳ ತಂದೆಯಾಗಿರುವ ಬಗ್ಗೆ ಅಜು ಇನ್ನೂ ತಮ್ಮ ಫೇಸ್ಬುಕ್ ಪುಟದಲ್ಲಿ ಹೇಳಿಕೊಂಡಿರದೇ ಇದ್ದರೂ ತಮಗೆ ವೈಯಕ್ತಿಕವಾಗಿ ಶುಭ ಕೋರಿದವರಿಗೆ ಧನ್ಯವಾದ ಹೇಳಿದ್ದಾರೆ.
‘‘ನಿಮ್ಮೆಲ್ಲರ ವೈಯಕ್ತಿಕ ಸಂದೇಶಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರುವುದಕ್ಕೆ ನನ್ನನ್ನು ಕ್ಷಮಿಸಿ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಗೆ ನಾನು ಚಿರಋಣಿ, ಎಲ್ಲರಿಗೂ ಧನ್ಯವಾದಗಳು,’’ ಎಂದು ಅವರು ಬರೆದಿದ್ದಾರೆ.







