ಕಾಟಿಪಳ್ಳ: ಮಿಸ್ಬಾಹ್ ಮಹಿಳಾ ಕಾಲೇಜಿನಲ್ಲಿ ಶಿಕ್ಷಕ ರಕ್ಷಕ ಸಭೆ
ಮಂಗಳೂರು, ಅ.1: ಕಾಟಿಪಳ್ಳದ ಮಿಸ್ಬಾಹ್ ವಿಮೆನ್ಸ್ ಕಾಲೇಜ್‌ನಲ್ಲಿ ಶಿಕ್ಷಕ ರಕ್ಷಕ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಳ್ಳಾಲ ಹಝ್ರತ್ ಸೈಯದ್ ಮದನಿ ಬನಾತ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಝಾಹೀದಾ ಜಲೀಲ್, ಮನೆಯೇ ಮಕ್ಕಳಿಗೆ ಒಂದು ಪಂಜರವಾಗಬಾರದು. ಈ ವಯಸ್ಸಿನಲ್ಲಿ ಮಕ್ಕಳು ನಮ್ಮ ಮಾತನ್ನು ಕೇಳುವುದಿಲ್ಲವೆಂದು ಹೇಳುವ ಪಾಲಕರೇ ಹೆಚ್ಚು. ನಮ್ಮ ಮಾತನ್ನು ಮಕ್ಕಳು ಕೇಳದಿದ್ದರೆ ನಾವು ಮಕ್ಕಳಿಗೆ ಕೊಟ್ಟ ಸಂಸ್ಕಾರ ಯಾವ ರೀತಿಯಾದ್ದು ಎಂದು ಯೋಚಿಸಬೇಕು. ಪೋಷಕರು ಸ್ವಲ್ಪ ಸಮಯವನ್ನಾದರೂ ತಮ್ಮ ಮಕ್ಕಳ ಜೊತೆ ಕಳೆಯಬೇಕು. ಇದರಿಂದ ಅವರ ಆಲೋಚನೆ, ಚಿಂತನೆಯ ಬಗ್ಗೆ ನಾವು ಹೆಚ್ಚು ತಿಳಿಯಬಹುದು ಎಂದು ಹೇಳಿದರು.
ಮಿಸ್ಬಾಹ್ ವಿಮೆನ್ಸ್ ಕಾಲೇಜಿನ ಅಧ್ಯಕ್ಷ ಬಿ.ಎಂ.ಮಮ್ತಾಜ್ ಅಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಚಾಲಕ ಬಿ.ಎ.ನಝೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಕಾಮಿಲ್, ಟ್ರಸ್ಟಿಗಳಾದ ಅಬ್ದುಲ್ ಹಕೀಮ್ ಫಾಲ್ಕನ್, ಫಕ್ರುದ್ದೀನ್ ಬಾವ, ಪ್ರಾಚಾರ್ಯ ಮುಹಮ್ಮದ್ ಆರೀಫ್ ಉಪಸ್ಥಿತರಿದ್ದರು.
ಉಪನ್ಯಾಸಕಿ ಸನಾಹ್ ಹುಸೈನ್ ಸ್ವಾಗತಿಸಿದರು. ಉಪನ್ಯಾಸಕಿ ರಂಜಿತಾ ವಂದಿಸಿದರು. ಉಪನ್ಯಾಸಕಿ ಶಾರದಾ ಕಾರ್ಯಕ್ರಮ ನಿರೂಪಿಸಿದರು.







