ತಮಿಳುನಾಡಿಗೆ ಕಾವೇರಿ ನೀರು ಹರಿಸುವುದು ಬೇಡ; ಸರ್ವ ಪಕ್ಷ ಸಭೆಯಲ್ಲಿ ಸರಕಾರಕ್ಕೆ ವಿಪಕ್ಷಗಳ ಸಲಹೆ

ಬೆಂಗಳೂರು, ಅ.1: ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದು ಬೇಡ ಎಂದು ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ವಿಪಕ್ಷಗಳ ನಾಯಕರು ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶ ಹೊರ ಬಂದ ಬಳಿಕ ಚರ್ಚಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಸದನದ ನಿರ್ಣಯಕ್ಕೆ ಬದ್ಧರಾಗಿರುವಂತೆ ಸರಕಾರಕ್ಕೆ ವಿಪಕ್ಷಗಳ ನಾಯಕರು ಸಲಹೆ ನೀಡಿದ್ದಾರೆ.
ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ವಿಪಕ್ಷ ಬಿಜೆಪಿ ಪ್ರಧಾನಿಗೆ ಈ ಸಂಬಂಧ ಒತ್ತಡ ಹೇರಲು ಸಿದ್ದವಿದೆ ಎಂದು ತಿಳಿಸಿದೆ.ಮಂಡಳಿಗೆ ರಾಜ್ಯದಿಂದ ಪ್ರತಿನಿಧಿಗಳನ್ನು ಸೂಚಿಸದಂತೆ ಜೆಡಿಎಸ್ ಸರಕಾರಕ್ಕೆ ವಿನಂತಿಸಿದೆ.
ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವೇಳೆ ನೀರು ಬಿಡದಿರುವ ರಾಜ್ಯ ಸರಕಾರದ ನಿಲುವಿನ ವಿರುದ್ಧ ಕಿಡಿ ಕಿಡಿಯಾಗಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನನ ದ್ವಿಸದಸ್ಯ ವಿಭಾಗೀಯ ಪೀಠ ಅಕ್ಟೋಬರ್ 1ರಿಂದ 6ರ ತನಕ 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕ ಸರಕಾರಕ್ಕೆ ಆದೇಶ ನೀಡಿತ್ತು.





