ಯುವತಿಯ ತೇಜೋವಧೆಗೆ ಯತ್ನ ಆರೋಪ: ಯುವಕನ ವಿರುದ್ಧ ಪ್ರಕರಣ
ಪುತ್ತೂರು, ಅ.1: ವಿವಾಹವಾಗುವುದಾಗಿ ನಂಬಿಸಿ, ಬಳಿಕ ಆಕೆಯ ವಿರುದ್ದವೇ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತೇಜೋವಧೆ ಮಾಡಿರುವ ಕುರಿತು ವಿದ್ಯಾರ್ಥಿನಿಯಾಗಿರುವ ಯುವತಿಯೊಬ್ಬಳು ನೀಡಿರುವ ದೂರಿನಂತೆ ಆರೋಪಿ ಯುವಕನ ವಿರುದ್ಧ ಪುತ್ತೂರಿನ ಗ್ರಾಮಾಂತರ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಳ ನಿವಾಸಿ ಕುಕ್ಕ ಎಂಬವರ ಪುತ್ರ ಗುರುರಾಜ್ ಎಂಬಾತ ಯುವತಿಗೆ ವಂಚಿಸಲು ಮುಂದಾಗಿ ತೇಜೋವಧೆಗೆ ಯತ್ನಿಸಿರುವ ಆರೋಪಿ.
ಶಿಕ್ಷಕನ ಪುತ್ರನಾಗಿರುವ ಗುರುರಾಜ್ ತನ್ನ ದೂರದ ಸಂಬಂಧಿಯೂ, ವಿದ್ಯಾರ್ಥಿನಿಯೂ ಆಗಿರುವ ಯುವತಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಇಂತಹ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ವಿವಾಹವಾಗುವುದಾಗಿ ನಂಬಿಸಿದ್ದ ಆತ ಬಳಿಕ ತನ್ನ ವಿರುದ್ಧವೇ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ಅವಹೇಳನಕಾರಿ ಮೊಬೈಲ್ ಸಂದೇಶಗಳನ್ನು ಕಳುಹಿಸುವ ಮೂಲಕ ಊರಲ್ಲಿ ತನ್ನ ತೇಜೋವಧೆ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ನೀಡಿರುವ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.





