ನಗು ಎಲ್ಲಾ ರೋಗಗಳಿಗೂ ಸಿದ್ದೌಷಧಿ: ಡಾ.ನಾ.ದಾಮೋದರ ಶೆಟ್ಟಿ

ಮುಲ್ಕಿ, ಅ.1: ಆಧುನಿಕ ಯುಗದಲ್ಲಿ ಕೆಲಸದ ಒತ್ತಡದಲ್ಲೇ ಜೀವನ ನಡೆಸುತ್ತಿರುವ ನಾವು ನಗುವುದನ್ನೇ ಮರೆತಿದ್ದೇವೆ. ನಗು ಎಲ್ಲಾ ರೋಗಗಳಿಗೂ ಸಿದ್ಧ ಔಷಧಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ನಾ. ದಾಮೋದರ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಹಳೆಯಂಗಡಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್‌ಗಳ ಸಹಯೋಗದೊಂದಿಗೆ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ವಿನೋದ ಸಾಹಿತ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಆರೋಗ್ಯಕ್ಕೆ ಉತ್ತಮವಾದ ನಗು, ಒಂಬತ್ತು ರಸಗಳಲ್ಲಿ ಪ್ರಮುಖವಾದುದು. ನಗು ಎಲ್ಲರ ಮನಸ್ಸುಗಳನ್ನು ನಗಿಸುವಂತಿರಬೇಕು. ಅಪಹಾಸ್ಯವಾಗಬಾರದು ಎಂದರು. ಉದ್ಘಾಟನೆಯನ್ನು ಡಾ. ನಾ. ದಾಮೋದರ ಶೆಟ್ಟಿ ಮತ್ತು ವಿದ್ಯಾರ್ಥಿನಿ ಅಶ್ವಿನಿ ಮುದ್ದಣ ಮನೋರಮೆಯ ಸಂಭಾಷಣೆಯ ಮೂಲಕ ವಿಶೇಷವಾಗಿ ನಡೆಸಿಕೊಟ್ಟರು.
ಕಾಲೇಜು ಪ್ರಾಶುಂಪಾಲ ವಿಶ್ವನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾದ್ಯಕ್ಷ ಎಚ್. ವಸಂತ್ ಬೆರ್ನಾಡ್, ಲಯನ್ಸ್ ಜಿಲ್ಲೆ ವಲಯ 5ರ ಅಧ್ಯಕ್ಷ ಲ. ಮೊಹಿದ್ದೀನ್ ಕುಂಞ್ಞೆ, ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಬ್ರಿಜೇಶ್ ಕುಮಾರ್, ಕನ್ನಡ ಚಿಂತನಾ ವೇದಿಕೆಯ ಪಿ.ಬಿ. ಪ್ರಸನ್ನ, ಕುಮಾರಿ ರಕ್ಷಾ, ಅಬ್ದುಲ್ ಮೊಹಿದ್ದೀನ್ ಕುತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೋ. ಮುರಳೀಧರ ಉಪಾದ್ಯಾಯ ಹಿರಿಯಡ್ಕ, ಎಸ್. ನಿತ್ಯಾನಂದ ಪಡ್ರೆ, ಸಂಧ್ಯಾ ಶೆಣೈ, ಡಾ. ಮಹಾಲಿಂಗ ಭಟ್ ಭಾಗವಹಿಸಿದರು.







