ಮೂಡುಬಿದಿರೆ: ಹಳೆಕಟ್ಟಡದ ಸಾಮಗ್ರಿಗಳನ್ನು ಕಳುಗೈದವರ ಸೆರೆ

ಮೂಡುಬಿದಿರೆ, ಅ.1: ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆ-ಪಾಲಡ್ಕ ಎಜುಕೇಶನ್ ಸೊಸೈಟಿ ವಿದ್ಯಾ ಸಂಸ್ಥೆಗೆ ಸೇರಿದ ಫಾರ್ಮಸಿ ಕಾಲೇಜಿನ ಹಳೆ ಕಟ್ಟಡದ ಸುಮಾರು 1ಲಕ್ಷ ರೂ. ವೌಲ್ಯದ ಸಿಮೆಂಟ್ ಶೀಟ್, ದಾರಂದ, ಹಲಗೆ ಕಿಟಕಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ರತ್ನಾಕರ ಪೂಪಾಡಿಕಲ್ಲು, ಸುಭಾಷ್ ಕಕ್ಕುಂಜೆ ಹಾಗೂ ಶಿವರಾಮ ಕಡಂದಲೆ ಬಂಧಿತ ಆರೋಪಿಗಳು.
ಫಾರ್ಮಸಿ ಕಟ್ಟಡದ ವಸ್ತುಗಳು ಕಳವು ಆಗಿರುವ ಬಗ್ಗೆ ಕಾಲೇಜಿಗೆ ಸಂಬಂಧಪಟ್ಟ ಸುದರ್ಶನ ಶೆಟ್ಟಿ ಎಂಬವರು ದೂರು ನೀಡಿದ್ದರು. ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕ ದೇಜಪ್ಪಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
Next Story





