ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಶ್ರೀನಿವಾಸ, ರಾಘವೇಂದ್ರನಿಗೆ ಜಾಮೀನು ಮಂಜೂರು

ಉಡುಪಿ, ಅ.1: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷ ನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ ಅವರಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ.
ಭಾಸ್ಕರ್ ಶೆಟ್ಟಿ ಕೊಲೆಯಲ್ಲಿ ಸಹಕರಿಸಿದ ಆರೋಪದಡಿ ಪ್ರಕರಣದ ಪ್ರಮುಖ ಆರೋಪಿ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರನನ್ನು ಮಣಿಪಾಲ ಪೊಲೀಸರು ಆ.11ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮುಂದೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಬಳಿಕ ಇವರಿಬ್ಬರನ್ನು ಆ.24ರಿಂದ 31ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಈ ಮಧ್ಯೆ ಆರೋಪಿಗಳ ಪರ ವಕೀಲ ವೈ.ವಿಕ್ರಂ ಹೆಗ್ಡೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಆ.18 ರಂದು ಆರೋಪಿಗಳಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಯನ್ನು ನ್ಯಾಯಾಧೀಶ ರಾಜೇಶ್ ಕರ್ಣಂ ಆ.29ರಂದು ತಿರಸ್ಕರಿಸಿದ್ದರು.
ನಂತರ ಸೆ.17ರಂದು ಆರೋಪಿಗಳಿಗೆ ಜಾಮೀನು ನೀಡುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಆಕ್ಷೇಪಣಾ ಸಲ್ಲಿಸಿದ್ದರು. ಸೆ.24 ರಂದು ವಿಕ್ರಂ ಹೆಗ್ಡೆ ವಾದ ಮಂಡಿಸಿದರೆ, ಸೆ.27ರಂದು ಶಾಂತಿ ಬಾಯಿ ಪ್ರತಿವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಾ ಧೀಶರು ಇಂದು ಸಾಕ್ಷನಾಶ ಆರೋಪಿಗಳಿಬ್ಬರಿಗೆ ಶರ್ತಬದ್ಧ ಜಾಮೀನು ನೀಡಿ ಆದೇಶ ನೀಡಿದರು. ಈ ಇಬ್ಬರು ಆರೋಪಿಗಳು ಪ್ರಸ್ತುತ ಹಿರಿಯಡ್ಕ ಜೈಲಿನಲ್ಲಿದ್ದಾರೆ.







