ವೇಮುಲರನ್ನು ಉಚ್ಚಾಟಿಸಿದ ಉಪಕುಲಪತಿ ವಿರುದ್ಧ ಘಟಿಕೋತ್ಸವದಲ್ಲಿ ವಿದ್ಯಾರ್ಥಿ ಪ್ರತಿಭಟಿಸಿದ್ದು ಹೀಗೆ
.jpg)
ಹೈದರಾಬಾದ್ , ಅ. 1 : ರೋಹಿತ್ ವೇಮುಲ ಜೊತೆ ಹೈದರಾಬಾದ್ ವಿವಿಯಿಂದ ಕೆಲವು ತಿಂಗಳ ಕಾಲ ಉಚ್ಚಾಟಿತರಾಗಿದ್ದ ವಿದ್ಯಾರ್ಥಿ ವಿ. ಸುಂಕಣ್ಣ ಉಪಕುಲಪತಿ ಅಪ್ಪಾ ರಾವ್ ಅವರಿಂದ ತಮ್ಮ ಪಿಎಚ್ ಡಿ ಸ್ವೀಕರಿಸಲು ನಿರಾಕರಿಸಿ ಪ್ರತಿಭಟಿಸಿದ್ದಾರೆ.
ವಿವಿಯ 18ನೇ ಘಟಿಕೋತ್ಸವದಲ್ಲಿ ಈ ಘಟನೆ ನಡೆದಿದೆ.
" ನಾನು ಇದನ್ನು ಮೊದಲೇ ಯೋಜನೆ ಹಾಕಿಕೊಂಡಿರಲಿಲ್ಲ. ನಾನು ಯಾರಾದರೂ ಅತಿಥಿಗಳು ಪದವಿ ಪ್ರದಾನ ಮಾಡಬಹುದು ಎಂದು ತಿಳಿದಿದ್ದೆ. ಆದರೆ ಕಾರ್ಯಕ್ರಮಕ್ಕೆ ಹೋಗಿ ನೋಡುವಾಗ ಅಪ್ಪಾ ರಾವ್ ಪದವಿ ಪ್ರದಾನ ಮಾಡುತ್ತಿದ್ದುದನ್ನು ನೋಡಿ ಅವರಿಂದ ಸ್ವೀಕರಿಸದೆ ಇರಲು ನಿರ್ಧರಿಸಿದೆ " ಎಂದು ಸುಂಕಣ್ಣ ಡಿ ನ್ಯೂಸ್ ಮಿನಿಟ್ ಗೆ ಹೇಳಿದ್ದಾರೆ.
ವೇದಿಕೆಯ ಮೇಲೆ ಹೋದ ಸುಂಕಣ್ಣ " ನಿಮ್ಮಿಂದ ಬಿಟ್ಟು ಬೇರೆ ಯಾರಿಂದಲೂ ನಾನು ಪದವಿ ಸ್ವೀಕರಿಸುತ್ತೇನೆ" ಎಂದು ಎಲ್ಲರ ಎದುರೇ ಹೇಳಿದರು. ಅವರ ಮನವೊಲಿಸಲು ಉಪಕುಲಪತಿ ಪ್ರಯತ್ನಿಸಿ ಈ ವಿಷಯ ಮತ್ತೆ ಮಾತನಾಡೋಣ ಎಂದು ಹೇಳಿದರೂ ಸುಂಕಣ್ಣ ಹಠ ಬಿಡಲಿಲ್ಲ. ಬಳಿಕ ಪ್ರೊ ವೈಸ್ ಚಾನ್ಸೆಲರ್ ವಿಪಿನ್ ಶ್ರೀವಾಸ್ತವ ಅವರು ಸುಂಕಣ್ಣ ಅವರಿಗೆ ಡಾಕ್ಟೊರೇಟ್ ಪ್ರದಾನ ಮಾಡಿದರು.
ವೇಮುಲ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಉಪಕುಲಪತಿ ಅಪ್ಪಾ ರಾವ್ ಅವರಿಗೆ ಜನವರಿಯಲ್ಲಿ ಕಡ್ಡಾಯ ರಜೆಯಲ್ಲಿ ಕಳಿಸಲಾಗಿತ್ತು. ಜೊತೆಗೆ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಆದರೆ ಮಾರ್ಚ್ ನಲ್ಲಿ ಮತ್ತೆ ಕರ್ತವ್ಯಕ್ಕೆ ಮರಳುವ ಮೂಲಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ತುತ್ತಾಗಿದ್ದರು.
Courtesy : thenewsminute.com







